ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ – ಅಪರಾಧಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ

Public TV
2 Min Read
RG Kar Hospital Rape copy

ಕೋಲ್ಕತ್ತಾ: ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ (RG Kar Medical College Hospital) ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಸಂಜಯ್‌ ರಾಯ್‌ಗೆ (34) ಜೀವಾವಧಿ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಕೋಲ್ಕತ್ತಾ ಕೋರ್ಟ್‌ (Kolkata court) ತೀರ್ಪು ಪ್ರಕಟಿಸಿದೆ.

Kolkata Doctor rape and murder

ಶನಿವಾರವಷ್ಟೇ (ಜ.18) ಕೋಲ್ಕತ್ತಾ (Kolkatta) ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಅನಿರ್ಬನ್ ದಾಸ್ (Anirban Das) ಅವರಿದ್ದ ಏಕಸದಸ್ಯ ಪೀಠ ಸಂಜಯ್‌ ರಾಯ್‌ನನ್ನು (Sanjay Roy) ದೋಷಿ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು, ಇಂದು (ಜ.20) ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತು. ವಿಚಾರಣೆ ನಡೆಸಿದ 57 ದಿನಗಳಲ್ಲಿ ಕೋರ್ಟ್‌ ತೀರ್ಪು ಪ್ರಕಟಿಸಿರುವುದು ವಿಶೇಷ.

ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಕೋರ್ಟ್‌ ಶಿಕ್ಷೆ ವಿಧಿಸಿದೆ. ಇದೇ ವೇಳೆ ಸಂತ್ರಸ್ತೆ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದ್ರೆ ಸಂತ್ರಸ್ತೆ ಪೋಷಕರು ತಮಗೆ ಪರಿಹಾರ ಬೇಡವೆಂದರು. ಈ ವೇಳೆ ಕೋರ್ಟ್‌, ಕಾನೂನು ಪ್ರಕಾರವೇ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹಣವನ್ನು ಹೇಗೆ ಬೇಕಾದ್ರೂ ಬಳಸಿಕೊಳ್ಳಲು ಸಂತ್ರಸ್ತೆ ಪೋಷಕರು ಅರ್ಹರಿರುತ್ತಾರೆ ಎಂದು ಹೇಳಿತು.

KOLKATA NURS CASE

ಇನ್ನೂ ನ್ಯಾಯಾಧೀಶರು ಶನಿವಾರ ತೀರ್ಪು ಪ್ರಕಟಿಸುತ್ತಿದ್ದಂತೆ ದೋಷಿಯಾಗಿರುವ ಸಂಜಯ್‌ ರಾವ್‌ ನಾನು ಅಮಾಯಕ. ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿ ತನ್ನ ಮೇಲಿದ್ದ ಆರೋಪಗಳನ್ನು ನಿರಾಕರಿಸಿದ್ದ.

Hang Him Or Do. Mother In Law Of Kolkata Rape Murder Case Accused

ಏನಿದು ಪ್ರಕರಣ?
2024ರ ಆಗಸ್ಟ್‌ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4  ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿತ್ತು.

Vandalism At Kolkata Hospital

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಕೊನೆಗೆ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಒಪ್ಪಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅತ್ಯಾಚಾರ ನಡೆದಿದ್ದು ದೃಢ ಎಂದು ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತಾ ಪೊಲೀಸರು ಆಗಸ್ಟ್‌ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಬಂಧನ ನಡೆದಿತ್ತು. ನವೆಂಬರ್‌ 12 ರಿಂದ ವಿಚಾರಣೆ ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಆರೋಪಿಯ ವಿಚಾರಣೆ ಜನವರಿ 9ರಂದು ಕೊನೆಗೊಂಡಿತ್ತು.

Share This Article