ಖಾಸಗೀಕರಣ ಹೊಸ್ತಿಲಲ್ಲಿದ್ದ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರದಿಂದ ಜೀವದಾನ – 11,440 ಕೋಟಿ ಪುನಶ್ಚೇತನ ಪ್ಯಾಕೇಜ್

Public TV
4 Min Read
HD Kumaraswamy 7

– 2030ರ ಹೊತ್ತಿಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ

ನವದೆಹಲಿ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿಲಲ್ಲಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ ಕಂಪನಿಯನ್ನು (Visakhapatnam Steel Plant) 11,440 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರದ ಉಕ್ಕು -ಬೃಹತ್ ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಅವರು ಘೋಷಿಸಿದರು.

ಇದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದೆ. ದೇಶೀಯ ಉಕ್ಕು ಕ್ಷೇತ್ರಕ್ಕೆ ಶಕ್ತಿ ತುಂಬುವ ದಿಟ್ಟ ಹೆಜ್ಜೆ ಇದಾಗಿದೆ ಎಂದರು.

ನವದೆಹಲಿ ಉಕ್ಕು ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಕುಮಾರಸ್ವಾಮಿ ಅವರು, ತಮ್ಮ ಇಲಾಖೆಯ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರ ಜೊತೆಗೂಡಿ ವೈಜಾಗ್ ಸ್ಟೀಲ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ವೈಜಾಗ್ ಸ್ಟೀಲ್ ಪುನಶ್ಚೇತನ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ಮೋದಿ ಅವರು ಸಂಕ್ರಾಂತಿ ಹೊತ್ತಿಗೆ ಆಂಧ್ರ ಪ್ರದೇಶ ಜನತೆಗೆ ಶುಭ ಸುದ್ದಿ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ವಿಶಾಖಪಟ್ಟಣ ಸ್ಟೀಲ್ ಕಾರ್ಖಾನೆಯ ಪುನಶ್ಚೇತನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿಗಳಿಗೆ ಹಾಗೂ ನಮ್ಮ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುವೆ ಎಂದು ಸಚಿವರು ಹೇಳಿದರು.

ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ
ಕಾರ್ಖಾನೆಯ ಪುನಚ್ಚೆತನ ಪ್ಯಾಕೇಜ್‌ನ ಪೂರ್ಣ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಎಲ್ಲಾ ಮೂರು ಬ್ಲಾಸ್ಟ್ ಪರ್ನೆಸ್‌ಗಳಿಗೆ ಚಾಲನೆ ಕೊಟ್ಟು ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ, ಕಾರ್ಖಾನೆ ಹೊಂದಿರುವ ಸಾಲವನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುತ್ತೇವೆ. ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ಮುಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಎಷ್ಟು ಹೂಡಿಕೆ?
ವೈಜಾಗ್ ಸ್ಟೀಲ್ ಕಾರ್ಖಾನೆಗೆ ಈ ಪ್ಯಾಕೇಜ್‌ನಲ್ಲಿ 10,300 ಕೋಟಿ ಹೂಡಿಕೆ ಮಾಡಲಾಗುವುದು ಹಾಗೂ 1,140 ಕೋಟಿಯನ್ನು ಷೇರು ರೂಪದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ 1,140 ಕೋಟಿಯನ್ನು 10 ವರ್ಷಗಳ ವರೆಗೂ ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಇದು ಮಹತ್ವದ ನಿರ್ಧಾರ ಆಗಿದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಕಾರ್ಖಾನೆಯನ್ನು ಅತ್ಯಂತ ದಕ್ಷತೆ, ಕ್ಷಮತೆಯಿಂದ ಮುನ್ನಡೆಸುತ್ತೇವೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಯಾಗಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಂಘಟಿತ ಪ್ರಯತ್ನ ನಡೆಸಿದ್ದೇವೆ. ಸಮುದ್ರ ದಂಡೆಯಲ್ಲಿರುವ ದೇಶದ ಅತ್ಯಂತ ವ್ಯೂಹಾತ್ಮಕ ಉಕ್ಕು ಸ್ಥಾವರವನ್ನು ರಕ್ಷಿಸಿಕೊಳ್ಳಲು ಹಾಗೂ ನಿರೀಕ್ಷಿತ ಗುರಿಗಳನ್ನು ಮುಟ್ಟಲು ನಾವು ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

2025ರ ಜನವರಿ ವೇಳೆಗೆ ಎರಡು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಮತ್ತು ಆಗಸ್ಟ್ 2025 ರ ವೇಳೆಗೆ ಮೂರು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಯೋಜಿಸಿದ್ದೇವೆ. ದೇಶೀಯ ಉಕ್ಕು ಉತ್ಪಾದನೆ ಹಾಗೂ ಉಕ್ಕು ಮಾರುಕಟ್ಟೆಗೆ ಈ ಕ್ರಮ ದೊಡ್ಡ ಕೊಡುಗೆ ನೀಡುತ್ತದೆ. ಮುಖ್ಯವಾಗಿ ಸಾವಿರಾರು ಉದ್ಯೋಗಿಗಳು ಮತ್ತು ಅವರ ಅವಲಂಬಿತರ ಜೀವನೋಪಾಯಕ್ಕೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

2030ರ ಹೊತ್ತಿಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ
ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟಬೇಕಾದರೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈಜಾಗ್ ಸ್ಟೀಲ್ ಪುನಶ್ಚೇತನ ಯೋಜನೆಯನ್ನು ಇದೇ ಉದ್ದೇಶದಿಂದ ರೂಪಿಸಲಾಗಿದೆ. ದೇಶೀಯ ಉಕ್ಕು ಉದ್ಯಮಕ್ಕೆ ಈ ಕಾರ್ಖಾನೆಯ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ವಿಶಾಪಟ್ಟಣ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನ ಮಾಡಬೇಕು ಎಂಬುದು ಆಂಧ್ರ ಪ್ರದೇಶ ಜನರ ಬಹುಕಾಲದ ಬೇಡಿಕೆ ಆಗಿತ್ತು. ನಾನು ಉಕ್ಕು ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ನನ್ನ ಮೊದಲ ಅಧಿಕೃತ ಭೇಟಿಯನ್ನು ಈ ಕಾರ್ಖಾನೆಗೆ ನೀಡಿದೆ. ಇಡೀ ಕಾರ್ಖಾನೆ ವೀಕ್ಷಣೆ ಜತೆಗೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿದ್ದೆ ಎಂದು ಅವರು ಹೇಳಿದರು.

Share This Article