ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಾಂಗ್ರೆಸ್ ಪಾಳಯದ ನಾಯಕರ ನಡುವೆ ಗುದ್ದಾಟ ಜೋರಾಗಿದೆ. ಸಚಿವ ಜಾರಕಿಹೊಳಿ ತಲೆಎಣಿಕೆ ಅಸ್ತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ಯಾರು ಏನೇ ಇದ್ದರೂ ಹೈಕಮಾಂಡ್‌ಗೆ ಭೇಟಿಯಾಗಿ ಹೇಳಲಿ. ಈಗಾಗಲೇ ಹೈಕಮಾಂಡ್ ನಾಯಕರು ಎಲ್ಲರಿಗೂ ಹೇಳಿದ್ದಾರೆ. ನಮ್ರತೆಯಿಂದ ಹೇಳ್ತಿದ್ದೇನೆ. ಇದು ಕಾರ್ಯಕರ್ತರು, ಮತದಾರರ ಪಕ್ಷ. ಯಾರು ಇರಲಿ, ಇಲ್ಲದೇ ಇರಲಿ ಪಕ್ಷ ಉಳಿಯುತ್ತೆ. ಸ್ವಾತಂತ್ರ್ಯ ಕೊಡಿಸಿದ ಗಾಂಧಿಜೀ ಅಧಿಕಾರ ಪಡೆದ್ರಾ? ಅಂಬೇಡ್ಕರ್ ಅವರು ಅಧಿಕಾರವನ್ನು ನಮಗೆ ಬಿಟ್ಟು ಹೋದರು. ನಾಳೆ ಸುರ್ಜೇವಾಲ ಬೆಳಗಾವಿಗೆ ಬರ್ತಿದ್ದಾರೆ. ಅಲ್ಲಿ ಹೋಗಿ ಮಾತಾಡಲಿ ಎಂದು ತಿಳಿಸಿದ್ದಾರೆ.
ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು. ಖರ್ಗೆ ಅವರನ್ನೇ ಇವರು ಪ್ರಶ್ನೆ ಮಾಡ್ತಾರಾ? ಹೀಗೆ ಮಾತಾಡೋದು ಸರಿಯಲ್ಲ. ಯಾವುದಾದರೂ ವಿಚಾರ ಇದ್ದರೆ ನಾನೇ ಕರೆದು ಪ್ರೆಸ್‌ಗೆ ಹೇಳ್ತೀನಿ. ಪಕ್ಷ ಕಟ್ಟುವಂಥದ್ದು ಉಳಿಸಿಕೊಳ್ಳುವುದು ಕಾಪಾಡುವುದು ಎಲ್ಲರಿಗೂ ಪಾಠ ಹೇಳಿದ್ದಾರೆ. ಯಾರೂ ಕೂಡ ಮಾತಾಡಬಾರದು ಎಂದು ಹೇಳಿದ್ದಾರೆ. ನಾಳೆ ಎಐಸಿಸಿ ಸುರ್ಜೆವಾಲಾ ಬೆಳಗಾವಿಗೆ ಬರ್ತಿದ್ದಾರೆ. ಪಾರ್ಟಿ ವಿಚಾರ ಮಾಧ್ಯಮದಲ್ಲಿ ಮಾತಾಡುವುದಲ್ಲ. ಏನೇ ಇದ್ರೂ ರಾಹುಲ್ ಗಾಂಧಿ ಹತ್ರ ಖರ್ಗೆಯವರ ಹತ್ರ ಹೋಗಿ ಮಾತಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ನನಗೆ ಏನಾದ್ರೂ ಸ್ಥಾನ ಬೇಕಾದರೆ ನೀವು ಕೊಡಿಸ್ತೀರಾ? ಅವರವರ ಶ್ರಮಕ್ಕೆ ತಕ್ಕ ಸ್ಥಾನ ನಾಯಕರು ಕೊಡ್ತಾರೆ. ಬಹಳ ಶ್ರಮ ಪಟ್ಟು ಡಿಕೆ ಶಿವಕುಮಾರ್ ಪಾರ್ಟಿ ತಂದಿಲ್ಲ. ಕಾರ್ಯಕರ್ತರು ತಂದಿದ್ದು ಪಾರ್ಟಿ. ನಮ್ರತೆಯಿಂದ ಮನವಿ ಮಾಡ್ತೇನೆ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಮಹಾತ್ಮಾ ಗಾಂಧಿಯೇ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಮನಸ್ಸು ಮಾಡಿದ್ರೆ ಪ್ರಧಾನಿ ಆಗ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಮಾಧ್ಯಮಗಳ ಮಾತೆಲ್ಲ ಕೇಳಲು ತಯಾರಿಲ್ಲ. ನಾನಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದನ್ನು ಕೇಳಲಿ. ಇವರು ಪ್ರಶ್ನೆ ಮಾಡ್ತಿರುವುದು ನನ್ನನ್ನಲ್ಲ ಮಲ್ಲಿಕಾರ್ಜುನ ಖರ್ಗೆಯನ್ನು. ಇವರು ಖರ್ಗೆಯವರನ್ನೇ ಪ್ರಶ್ನೆ ಮಾಡ್ತಿದ್ದಾರೆ ಎಂದು ಕೆಂಡಕಾರಿದ್ದಾರೆ.