ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

Public TV
2 Min Read
Mark Zuckerberg Nishikant Dubey

ನವದೆಹಲಿ: ಫೇಸ್‌ಬುಕ್‌ (Facebook) ಕಂಪನಿಯ ಮಾತೃಸಂಸ್ಥೆ ಮೆಟಾ (Meta) ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ (Nishikant Dubey) ಹೇಳಿದ್ದಾರೆ.

ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ಅವರು ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್‌ ಅವರು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಉದ್ದೇಶಪೂರ್ವಕವಲ್ಲದ ಈ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

2024 ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಲಿಲ್ಲ ಎಂಬ ಮಾರ್ಕ್ ಜುಕರ್‌ಬರ್ಗ್‌ ಅವರ ಅಭಿಪ್ರಾಯವು ಹಲವಾರು ದೇಶಗಳಿಗೆ ನಿಜವಾಗಿದೆ. ಆದರೆ ಈ ಹೇಳಿಕೆ ಭಾರತಕ್ಕೆ ಅಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ನಿಶಿಕಾಂತ್‌ ದುಬೆ, ಕೊನೆಗೂ ಮೆಟಾ ಇಂಡಿಯಾದ ಅಧಿಕಾರಿಗಳು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಇದು ಭಾರತದ ಸಾಮಾನ್ಯ ನಾಗರಿಕರ ಗೆಲುವು. ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ಜನರು ದೇಶದ ಬಲಿಷ್ಠ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈಗ ನಮ್ಮ ಸಮಿತಿಯ ಜವಾಬ್ದಾರಿ ಈ ವಿಷಯದ ಮೇಲೆ ಕೊನೆಗೊಳ್ಳುತ್ತದೆ. ಭವಿಷ್ಯದಲ್ಲಿ ನಾವು ಇತರ ವಿಷಯಗಳ ಬಗ್ಗೆ ಈ ಸಾಮಾಜಿಕ ವೇದಿಕೆಗಳನ್ನು ಕರೆಯುತ್ತೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

ಜುಕರ್‌ಬರ್ಗ್‌ ತಪ್ಪು ಮಾಹಿತಿ ನೀಡಿದ್ದಾರೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಮೆಟಾಗೆ ಸಮನ್ಸ್‌ ಜಾರಿ ಮಾಡಲಾಗುವುದು ಎಂದು ಮಂಗಳವಾರ ನಿಶಿಕಾಂತ್ ದುಬೆ ತಿಳಿಸಿದ್ದರು.

 

Share This Article