ಮುಂಬೈ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಭಾರತ ತಂಡ ತನ್ನ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದ್ದರೂ, 8 ವರ್ಷಗಳ ಬಳಿಕ ಮತ್ತೆ ನಡೆಯುತ್ತಿರುವ ಪ್ರತಿಷ್ಠಿತ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ತಂಡದ ನಾಯಕ ಆತಿಥೇಯ ರಾಷ್ಟ್ರ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಾಂಪಿಯನ್ಸ್ ಟ್ರೋಫಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಫೆ.16 ಅಥವಾ 17 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದ್ದು, ಅಭ್ಯಾಸ ಪಂದ್ಯದ ವೇಳಾಪಟ್ಟಿ ಇದಾಗಿದೆ. ಎಲ್ಲಾ ತಂಡದ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದು ಐಸಿಸಿ ಕಾರ್ಯಕ್ರಮಗಳಿಗೆ ಸಾಮಾನ್ಯ ಪದ್ಧತಿಯಾಗಿದೆ.
29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮೆಗಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಪಿಸಿಬಿ ಮತ್ತೆ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಭಾರತೀಯ ತಂಡದ ನಾಯಕ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಇದೇ ಫೆ.19 ರಂದು ಚಾಲನೆ ಸಿಗಲಿದೆ. 1996 ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜೊತೆಗೂಡಿ ಆಯೋಜಿಸಿದ ನಂತರ ಪಾಕಿಸ್ತಾನ ಆತಿಥೇಯರಾಗಿ ಆಡುತ್ತಿರುವ ಮೊದಲ ಪ್ರಮುಖ ಐಸಿಸಿ ಟೂರ್ನಿ ಇದಾಗಿದೆ.
ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪಾಕಿಸ್ತಾನವು ಹೆಚ್ಚಿನ ಪಂದ್ಯಗಳನ್ನು ಆಯೋಜಿಸುತ್ತದೆ. ಆದರೆ, ಭಾರತದ ಎಲ್ಲಾ ಗುಂಪು ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ದುಬೈನಲ್ಲಿ ನಡೆಯಲಿದೆ.