Delhi Election| ಮೋದಿಯಂತೆ ಕೇಜ್ರಿವಾಲ್‌ ಸುಳ್ಳು ಹೇಳುತ್ತಾರೆ: ರಾಹುಲ್‌ ಕಿಡಿ

Public TV
2 Min Read
rahul gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯಂತೆ (Narendra Modi) ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸುಳ್ಳು ಭರವಸೆ ನೀಡಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

ಸೀಲಾಂಪುರಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ ಅವರು, ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಭ್ರಷ್ಟಾಚಾರ (Corruption) ಮುಕ್ತಗೊಳಿಸಿದ್ದಾರೆಯೇ? ಪ್ರಧಾನಿ ಮೋದಿ ಅವರಂತೆ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡುತ್ತಾರೆ ಮತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಇಬ್ಬರೂ ಹಣದುಬ್ಬರ ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ದೂರಿದರು.

ಶೀಲಾ ದೀಕ್ಷಿತ್ ಅವರು ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿದ್ದಾಗ ದೆಹಲಿ ಸ್ವಚ್ಛವಾಗಿತ್ತು. ಶೀಲಾ ದೀಕ್ಷಿತ್ (Sheila Dikshit) ದೆಹಲಿಗೆ ಮಾಡಿದ ಕೆಲಸವನ್ನು ಬೇರೆ ಯಾವ ಮುಖ್ಯಮಂತ್ರಿಯೂ ಸರಿಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಮೋದಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಜಾತಿ ಜನಗಣತಿಯ ಬಗ್ಗೆ ಮಾತನಾಡುವುದೇ ಇಲ್ಲ. ಇಬ್ಬರೂ ಹಿಂದುಳಿದ ಸಮುದಾಯಗಳು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯಬಾರದು ಎಂದು ಬಯಸುತ್ತಾರೆ ಎಂದು ದೂರಿದರು.

 

ನೀವು ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಜಾತಿ ಜನಗಣತಿಯನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂದು ಕೇಳಬೇಕು. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಜಾತಿ ಜನಗಣತಿಯನ್ನು ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಆಪ್‌ ಮತ್ತು ಕಾಂಗ್ರೆಸ್‌ INDIA ಒಕ್ಕೂಟದ ಭಾಗವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿದೆ.

 

Share This Article