ಜೆಮಿಮಾ ಭರ್ಜರಿ ಶತಕ – ಐರ್ಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ 116 ರನ್‌ಗಳ ಜಯ; ಸರಣಿ ಕೈವಶ

Public TV
2 Min Read
India Women

ರಾಜ್‌ಕೋಟ್‌: ಜೆಮಿಮಾ ರೋಡ್ರಿಗಸ್‌ ಭರ್ಜರಿ ಶತಕ ಹಾಗೂ ಕ್ಯಾಪ್ಟನ್‌ ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಪ್ರತೀಕಾ ರಾವಲ್ ಫಿಫ್ಟಿ ಆಟದ ನೆರವಿನಿಂದ ಮಹಿಳೆಯರ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಐರ್ಲೆಂಡ್‌ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಮೂರು ದಿನದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ರಾಜ್‌ಕೋಟ್‌ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಭಾರತ ತಂಡ 116 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

Jemimah Rodrigues

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತು. ಆರಂಭಿಕರಾಗಿ ಫೀಲ್ಡಿಗಿಳಿದ ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್‌ ಜೋಡಿ 156 ರನ್‌ಗಳ ಜೊತೆಯಾಟವಾಗಿ ಗಮನ ಸೆಳೆಯಿತು. ಕ್ಯಾಪ್ಟನ್‌ ಆಗಿ ಉತ್ತಮ ಲಯದಲ್ಲಿರುವ ಸ್ಮೃತಿ ಮಂಧಾನ ಅರ್ಧಶತಕ ಬಾರಿಸಿ (73 ರನ್‌, 54 ಬಾಲ್‌, 10 ಫೋರ್‌, 2 ಸಿಕ್ಸರ್‌) ಜವಾಬ್ದಾರಿಯುತ ಆಟವಾಡಿದರು.

ಪ್ರತೀಕಾ ರಾವತ್‌ 67, ಹರ್ಲೀನ್ ಡಿಯೋಲ್ 89 ರನ್‌ ಗಳಿಸಿ ತಂಡಕ್ಕೆ ಮತ್ತಷ್ಟು ಬೂಸ್ಟ್‌ ನೀಡಿದರು. ಜೆಮಿಮಾ ರೋಡ್ರಿಗಸ್ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು. 102 ರನ್‌ (91 ಬಾಲ್‌, 12 ಫೋರ್‌) ಬಾರಿಸಿ ಮಿಂಚಿದರು. ಜೆಮಿಯಾ ಮತ್ತು ಡಿಯೋಲ್‌ ಜೋಡಿ 168 ಬಾಲ್‌ಗಳಿಗೆ 183 ರನ್‌ಗಳಿಸಿ ತಂಡದ ಮೊತ್ತ 300 ಗಡಿ ದಾಟಲು ಸಹಕಾರಿಯಾದರು.

ಟೀ ಇಂಡಿಯಾ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 370 ರನ್‌ ಬಾರಿಸಿದರು. ಐರ್ಲೆಂಡ್‌ ಪರ ಓರ್ಲಾ ಪ್ರೆಂಡರ್‌ಗ್ಯಾಸ್ಟ್, ಅರ್ಲೀನ್ ಕೆಲ್ಲಿ ತಲಾ 2 ಹಾಗೂ ಜಾರ್ಜಿನಾ ಡೆಂಪ್ಸೆ 1 ವಿಕೆಟ್‌ ಕಿತ್ತರು.

ವನಿತೆಯರ ಭಾರತ ತಂಡ ನೀಡಿದ 371 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಐರ್ಲೆಂಟ್‌ ಸೋಲನುಭವಿಸಿತು. 50 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಾರಾ ಫೋರ್ಬ್ಸ್ 38, ಕ್ರಿಸ್ಟಿನಾ ಕೌಲ್ಟರ್ ರೀಲಿ 80, ಲಾರಾ ಡೆಲಾನಿ 37, ಲಿಯಾ ಪೌಲ್‌ 27 (ಔಟಾಗದೆ) ಗಳಿಸಿದರು. ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ 3 ವಿಕೆಟ್‌ ಕಿತ್ತು ಮಿಂಚಿದರು. ಪ್ರಿಯಾ ಮಿಶ್ರಾ 2, ಟೈಟಾಸ್‌ ಸಾಧು ಮತ್ತು ಸಯಾಲಿ ಸತ್ಘರೆ ತಲಾ 1 ವಿಕೆಟ್‌ ಕಿತ್ತರು.

Share This Article