ದಾವಣಗೆರೆ: ಹಸುಗಳ ಮೇಲೆ ಪೈಶಾಚಿಕ ಕೃತ್ಯ ನಡೆಸಿದವರನ್ನು ಎನ್‍ಕೌಂಟರ್ ಮಾಡುವಂತೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಚಾಮರಾಜಪೇಟೆಯಲ್ಲಿ (Chamrajpet) ನಡೆದ ಕೃತ್ಯ ಅಮಾನವೀಯವಾದದ್ದು. ಪಕ್ಷಾತೀತವಾಗಿ ಈ ಪ್ರಕರಣವನ್ನು ಖಂಡಿಸಬೇಕು. ಹಸುಗಳನ್ನು ದೇವರು ಎಂದು ಸಮಾಜ ಪೂಜಿಸುತ್ತದೆ. ಮತಾಂಧರು ವಿಕೃತ ಮನಸ್ಸಿನಿಂದ ಈ ಕೃತ್ಯ ನಡೆಸಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಮೀರ್ ಅಹ್ಮದ್ (Zameer Ahmed) ಕ್ಷೇತ್ರದಲ್ಲಿ ಇಂತಹ ದುರ್ಘಟನೆ ನಡೆದಿದೆ. ಈ ಕೃತ್ಯ ನಡೆಸಿದ್ದು ಭಯೋತ್ಪಾದಕ ಅಲ್ಪಸಂಖ್ಯಾತರು. ಈ ಘಟನೆಗೆ ಕೇವಲ ಜಮೀರ್ ಮಾತ್ರ ಅಲ್ಲ, ಇಡೀ ಕಾಂಗ್ರೆಸ್ ಕಾರಣ. ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಇಂತಹ ಕೃತ್ಯ ನಡೆಸಿದವರನ್ನು ಬಂಧಿಸುವುದಷ್ಟೇ ಅಲ್ಲ, ಎನ್‍ಕೌಂಟರ್ ಮಾಡಿ ಬಿಸಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ವಿಕೃತಿ ಮನಸ್ಸುಗಳು ನಾಳೆ ನಮ್ಮ ನಿಮ್ಮ ಮನೆಗಳಿಗೆ ಬಂದು ಏನು ಬೇಕಾದರೂ ಮಾಡಬಹುದು. ಈ ದೇಶವನ್ನು ಏನು ಪಾಕಿಸ್ತಾನ, ಬಾಂಗ್ಲಾದೇಶವನ್ನಾಗಿ ಮಾಡಿಕೊಂಡಿದ್ದೀರಾ? ಪೊಲೀಸರಿಗೆ ಪೂರ್ತಿ ಅಧಿಕಾರವನ್ನು ಕೊಡಿ. ಗೃಹ ಸಚಿವರೇ ಏನು ಮಾಡ್ತಾ ಇದೀರಿ? ಸಿದ್ದರಾಮಯ್ಯನವರೇ, ಡಿಕೆಶಿಯವರೇ ಈ ರಾಜ್ಯದಲ್ಲಿ ಏನು ನಡೀತಾ ಇದೆ ಅಂತ ಗೊತ್ತಾ? ಕಾಂಗ್ರೆಸ್‍ನವರಿಗೆ ಸ್ವಾಭಿಮಾನ ಮುಖ್ಯವೋ? ಅಧಿಕಾರ ಮುಖ್ಯವೋ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ, ಅಭಿವೃದ್ಧಿ ಇಲ್ಲ. ಕೇವಲ ಕುರ್ಚಿಗಾಗಿ ಕಿತ್ತಾಟ ಮಾಡುತ್ತಿದ್ದಾರೆ. ದೇವರ ಹೆಸರು ಇಟ್ಟುಕೊಂಡ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಅವರೇ, ಜಮೀರ್ ಅವರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ನಿಮ್ಮ ಘನತೆಗೆ ಧಕ್ಕೆ ಬರುತ್ತದೆ ಎಂದು ಎಚ್ಚರಿಸಿದ್ದಾರೆ.