ರಸ್ತೆ ದಾಟುತ್ತಿದ್ದ ಜಿಂಕೆಗೆ ಕಾರು ಡಿಕ್ಕಿ – ಜಿಂಕೆ ಸಾವು, ಆರೋಪಿ ವಶಕ್ಕೆ

Public TV
1 Min Read
car hit to deer

ಚಾಮರಾಜನಗರ: ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿ-766ರ ಬಂಡೀಪುರ ಅಭಯಾರಣ್ಯ ಮದ್ದೂರು ವಲಯದ ಕಗ್ಗಳದಹುಂಡಿ ಸಮೀಪದಲ್ಲಿ ನಡೆದಿದ್ದು, ಕಾರು ಚಾಲಕನನ್ನು ಬಂಧಿಸಲಾಗಿದೆ.

ಕೇರಳದ ವಯನಾಡಿನ ಝಾಕೀರ್ (56) ಬಂಧಿತ ಆರೋಪಿ. ಈತ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಸ್ವೀಪ್ (ಕೆ.ಎಲ್.72-313) ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಕಗ್ಗಳದಹುಂಡಿ ಸಮೀಪದ ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಜಿಂಕೆ ರಸ್ತೆಯಲ್ಲೆ ಪ್ರಾಣ ಕಳೆದುಕೊಂಡಿದೆ. ನಂತರ ಅರಣ್ಯಾಧಿಕಾರಿಗಳು ದೌಡಾಯಿಸಿ ಚಾಲಕನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಜಿಂಕೆ ಕಳೆಬರವನ್ನು ಸುಡಲಾಗುತ್ತದೆ ಎಂದು RFO ಕೆ.ಪಿ.ಸತೀಶ್ ಕುಮಾರ್ ಮಾಹಿತಿ ನೀಡಿದರು.

ಸ್ಥಳಕ್ಕೆ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಮದ್ದೂರು ವಲಯ ಉಪ ಅರಣ್ಯಾಧಿಕಾರಿ ಗೌಸ್, ಶಿವಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share This Article