ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ ರವಿ (CT Ravi) ಸಿಐಡಿ (CID) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಘಟನೆ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕಲಾಪದ ವೇಳೆ ಬೆಳಗಾವಿಯಲ್ಲಿ ಸಿ.ಟಿ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅಶ್ಲೀಲ ಪದಬಳಕೆ ಮಾಡಿದ್ದ ಆರೋಪ ಎದುರಿಸಿದ್ದರು. ಸಚಿವೆಯ ಬೆಂಬಲಿಗರು ವಿಧಾನ ಸಭೆಯ ಮೊಗಸಾಲೆಯಲ್ಲಿ ಶಾಸಕ ಸಿ.ಟಿ ರವಿ ವಿರುದ್ಧ ಹಲ್ಲೆಗೆ ಯತ್ನ ನಡೆಸಿದ್ದರು. ಘಟನೆಯ ಬಗ್ಗೆ ಸಿ.ಟಿ ರವಿ ಹಾಗೂ ಪರಿಷತ್ ಶಾಸಕರಾದ ಸಂಕನೂರು ಹಾಗೂ ಅರುಣ್ ಸಭಾಪತಿಗಳಿಗೆ ದೂರು ನೀಡಿದ್ದರು. ಸಭಾಪತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದರು. ಹಾಗಾಗಿ ಘಟನೆ ಸಂಬಂದ ಹಿರೇ ಬಾಗೇವಾಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಸರ್ಕಾರ ವಹಿಸಿದ್ದ ಕಾರಣ ಬಿಜೆಪಿ ಪರಿಷತ್ ಶಾಸಕರು ಕೊಟ್ಟ ದೂರು ಕೂಡ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರೊ ಡಿವೈಎಸ್ಪಿ ಕೇಶವಮೂರ್ತಿ ಸಿ.ಟಿ ರವಿಯವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲು ಸೂಚಿಸಿ ನೋಟಿಸ್ ನೀಡಿದ್ದರು. ಸಿಐಡಿಯಿಂದ ನೋಟಿಸ್ ಬಂದ ಕಾರಣ ವಿಚಾರಣೆಗೆ ಹಾಜರಾಗಿ ಘಟನೆಯ ವೇಳೆ ಯಾರೆಲ್ಲ ಇದ್ದರು ಅನ್ನೋದರ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಸುವರ್ಣಸೌಧದ ಮೊಗಸಾಲೆಯಿಂದ ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ಸಭಾಪತಿಗಳಿಗೆ ದೂರು ನೀಡಲಾಗಿತ್ತು. ಅದರ ಬಗ್ಗೆ ವಿಚಾರಣೆ ಇತ್ತು, ಯಾರು ಹಲ್ಲೆಮಾಡಲು ಯತ್ನಿಸಿದ್ರು ಅನ್ನೋ ಮಾಹಿತಿ ನೀಡಿದ್ದೇನೆ. ಮೊದಲು ಪಶ್ಚಿಮ ದ್ವಾರದ ಬಳಿ ಹಲ್ಲೆಗೆ ಯತ್ನ ನಡೆದಿತ್ತು. ವಿಧಾನಸಭೆ ವಿಪಕ್ಷ ನಾಯಕರ ಜೊತೆ ಚರ್ಚೆ ಮುಗಿಸಿ ಹೊರಬರುವಾಗ 2ನೇ ಬಾರಿ ಹಲ್ಲೆಗೆ ಯತ್ನಿಸಿದ್ದರು. ಸಿಸಿ ಕ್ಯಾಮೆರಾ ದಾಖಲೆಗಳು ಕೂಡ ಇದೆ. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ, ಚನ್ನರಾಜ್ ಹಟ್ಟಿ ಹೊಳಿ ಪಿಎ ಇಬ್ಬರ ಹೆಸರು ಹೇಳಿದ್ದೇನೆ. ಸಿಸಿ ಕ್ಯಾಮೆರಾ ಫೂಟೇಜ್ ನೀಡಿದ್ರೆ ಗುರ್ತಿಸೋದಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.