ಮುಂಜಾನೆ ಟೀ ಕುಡಿಯೋಕೆ ಬೆಂಗ್ಳೂರಿಂದ ಮಾಗಡಿಗೆ ಪಯಣ – ಇನ್ನೋವಾ ಪಲ್ಟಿಯಾಗಿ ಇಬ್ಬರು ದುರ್ಮರಣ

Public TV
1 Min Read
Ramanagar Accident

– ನಿಂತಿದ್ದ ಕ್ಯಾಂಟರ್‌ಗೆ ಕಾರು ಡಿಕ್ಕಿ ಇಬ್ಬರು ಸಾವು

ರಾಮನಗರ: ಇನ್ನೋವಾ ಕಾರು ಪಲ್ಟಿಯಾಗಿ (Car Accident) ಇಬ್ಬರು ಸಾವಿಗೀಡಾದ ಘಟನೆ ಮಾಗಡಿಯ (Magadi) ತಾವರೆಕೆರೆ ರಸ್ತೆಯ ಜನತಾ ಕಾಲೋನಿ ಬಳಿ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ಮಂಜು (31) ಹಾಗೂ ಕಿರಣ್ (30) ಎಂದು ಗುರುತಿಸಲಾಗಿದೆ. ಕಾರಲ್ಲಿ 8 ಜನ ಸ್ನೇಹಿತರು ಹೊಸ ವರ್ಷದ ಪಾರ್ಟಿ ಮೂಡಲ್ಲಿ ಮುಂಜಾನೆ 3 ಗಂಟೆಗೆ ಟೀ ಕುಡಿಯೋಕೆ ಬೆಂಗಳೂರಿಂದ ಮಾಗಡಿಗೆ ಬಂದಿದ್ದರು. ಟೀ ಕುಡಿದು ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ 6 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಅಪಘಾತದಲ್ಲಿ, ನಿಂತಿದ್ದ ಕ್ಯಾಂಟರ್‌ಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದು ಕನಕಪುರ ತಾಲೂಕಿನ ಸಾತನೂರು ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ಮೃತರನ್ನು ನಿರಂಜನ್ (41) ಹಾಗೂ ವಿಶ್ವನಾಥ್ (43) ಎಂದು ಗುರುತಿಸಲಾಗಿದೆ. ಖಾಸಗಿ ರೆಸಾರ್ಟ್‍ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ವಾಪಾಸ್ ಬೆಂಗಳೂರು ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಕ್ಯಾಂಟರ್‍ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article