– ಮೋದಿ ಅವರ ಬಗ್ಗೆ ಗೌರವವಿದೆ ಎಂದ ಸ್ವಾಮೀಜಿ
– ದೇವರು ಬಂದು ನಿಮಗೆ ವೋಟ್ ಹಾಕಿ ಗೆಲ್ಲಿಸಿಲ್ಲ
– ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ಖಂಡನೆ – ಚಾ.ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಉರಿಲಿಂಗಿಪೆದ್ದಿ ಮಠದ ಸ್ವಾಮೀಜಿ ಜ್ಞಾನಪ್ರಕಾಶ್ ಸ್ವಾಮೀಜಿ (Jnanaprakash Swamiji) ಆಕ್ರೋಶ ಹೊರಹಾಕಿದರು.
ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಚಾಮರಾಜನಗರದಾದ್ಯಂತ ದಲಿತ ಸಂಘಟನೆಗಳು ಮಂಗಳವಾರ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ಮಾತನಾಡಿದ ಅವರು, ಅಮಿತ್ ಶಾ ಅವರ ಹೇಳಿಕೆ ರಾಷ್ಟ್ರಕ್ಕೆ ಮಾಡಿರುವ ಅವಮಾನ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಅಮಿತ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಸುಮೋಟೊ ಕೇಸ್ ದಾಖಲಿಸಬೇಕು ಎಂದು ಮನವಿ ಮಾಡಿದರು.
ಮೋದಿ ಜಿ ಸಂವಿಧಾನದ ಬಗ್ಗೆ ಬಹಳ ಗೌರವ ಇಟ್ಟು ಮಾತನಾಡುತ್ತಿದ್ದಾರೆ. ಸಂವಿಧಾನಕ್ಕೆ ನಮಸ್ಕಾರವನ್ನೂ ಮಾಡಿದ್ದಾರೆ. ಮೋದಿಯವರ ಬಗ್ಗೆ ಗೌರವವಿದೆ. ಆದರೆ ಅವರ ಸಚಿವ ಸಂಪುಟದಲ್ಲಿ ಅಮಿತ್ ಶಾ ಇರುವುದು ಅಸಹ್ಯ. ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಷ್ಟ್ರ ಹಾಗೂ ರಾಜ್ಯ ವ್ಯಾಪಿ ಎಲ್ಲ ಎಂಪಿ, ಎಂಎಲ್‌ಎಗಳ ಕಚೇರಿ ತೆರೆಯಲು ಬಿಡುವುದಿಲ್ಲ. ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಯಾವುದೇ ಶಾಸಕರು, ಸಂಸದರು ಆಗಿರಲಿ ಅವರ ಕಚೇರಿ ತೆರೆಯಲು ಬಿಡಲ್ಲ. ದೇವರು ಬಂದು ನಿಮಗೆ ವೋಟು ಹಾಕಿ ಗೆಲ್ಲಿಸಿಲ್ಲ. ದೇವರು ವೋಟು ಹಾಕಿರುವ ಬಗ್ಗೆ ದಾಖಲೆ ಕೊಟ್ಟರೆ ನಾವೇ ಶಿಕ್ಷೆಗೆ ಒಳಗಾಗುತ್ತೇವೆ. ಜನರಿಂದ ವೋಟು ಪಡೆದು ಸದನದಲ್ಲಿ ದೇವರು.. ದೇವರು ಅಂದರೆ ಇದು ಪ್ರಜಾಪ್ರಭುತ್ವನಾ? ದೇವರ ಪ್ರಭುತ್ವನಾ ಎಂದು ಪ್ರಶ್ನಿಸಿದ್ದಾರೆ.
ಇಂದು ಚಾಮರಾಜನಗರ ಬಂದ್‌ಗೆ ದಲಿತ ಸಂಘಟನೆಗಳ ಕರೆ ನೀಡಿದ್ದವು. ಬಂದ್‌ಗೆ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಬೆಂಬಲ ನೀಡಿ ನೀಡಿದ್ದಾರೆ. ಬಂದ್ ಹಿನ್ನೆಲೆ ನಗರದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದವು. ತಾತ್ಕಾಲಿಕವಾಗಿ ಸಾರಿಗೆ ಸಂಚಾರ ನಿಲ್ಲಿಸಲಾಗಿತ್ತು. ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದವು. ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಬಸ್ ಸ್ಟ್ಯಾಂಡ್ ರೋಡ್‌ನ ಅಂಗಡಿಗಳು ಮುಚ್ಚಿದ್ದವು.