ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ನನ್ನ ರಾಜೀನಾಮೆ ಪ್ರಶ್ನೆಯೇ ಇಲ್ಲ: ಪ್ರಿಯಾಂಕ್‌ ಖರ್ಗೆ

Public TV
2 Min Read
Priyank Kharge

ಬೆಂಗಳೂರು: ಎಷ್ಟೇ ಚಿರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿನ್‌ ಪಂಚಾಳ್‌ (Sachin Panchal) ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ (CID) ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಅವರಿಗೆ ಸಿಬಿಐ (CBI) ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಸಿಬಿಐ ತನಿಖೆಗೆ ಕೇಳುತ್ತಾರೆ. ವರ್ಷಗಳ ಹಿಂದೆ ಬಿಜೆಪಿ ಕೈಯಲ್ಲಿ ಎಲ್ಲಾ ಸಂಸ್ಥೆಗಳು ಇತ್ತು ಏನ್ ಮಾಡಿದರು? ಬಿಜೆಪಿ ಯಾರದ್ದೋ ತಲೆ ದಂಡ ಆಗುತ್ತೆ ಅಂತ ಕಾಯ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಯಾರ ತಲೆ ತಂಡ ಆಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಬಿಐಗೆ ನೀಡದಿದ್ದರೆ ಕಲಬುರಗಿಯಲ್ಲಿ ಬೃಹತ್‌ ಹೋರಾಟ – ಪ್ರಿಯಾಂಕ್‌ ವಿರುದ್ಧ ವಿಜಯೇಂದ್ರ ಆಕ್ರೋಶ

ಕಲಬುರಗಿಗೆ (Kalaburagi) ಮುತ್ತಿಗೆ ಹಾಕೋ ಎಚ್ಚರಿಕೆ ಕೊಟ್ಟಿರುವ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಚಿವರು,ಕಲಬುರಗಿಗೆ ಮುತ್ತಿಗೆ ಹಾಕಲಿ ಯಾರು ಬೇಡ ಎಂದಿದ್ದಾರೆ. ನನ್ನ ವಿರುದ್ದ ಏನಾದರೂ ದಾಖಲಾತಿ ಇದ್ದರೆ ತಂದು ಕೊಡಿ. ನಿಮಗೆ ನಾಚಿಕೆ ಆಗಬೇಕು. ಯಾಕೆ ಕಲಬುರಗಿಗೆ ಮುತ್ತಿಗೆ ಹಾಕ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರನ್ನು ಮಾಧ್ಯಮಗಳು ಯಾಕೆ ಅಷ್ಟು ಸಿರಿಯಸ್ ಆಗಿ ತೆಗೆದುಕೊಂಡಿದ್ದೀರಿ? ಹೈಕಮಾಂಡ್ ನಾಯಕರೇ ರಾಜ್ಯ ಬಿಜೆಪಿ ನಾಯಕರನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಯಡಿಯೂರಪ್ಪ ಫೋಕ್ಸೋ ಪ್ರಕರಣಕ್ಕೆ ನೋಟಿಸ್‌ ಕೊಟ್ರಾ? ಮುನಿರತ್ನ ಕೇಸ್ ನಲ್ಲಿ ಹೈಕಮಾಂಡ್ ನಾಯಕರು ಏನ್ ಕ್ರಮ ತೆಗೆದುಕೊಂಡಿದ್ದಾರೆ?  ಯತ್ನಾಳ್ ವಿರುದ್ದ ಏನ್ ಕ್ರಮ ಆಯ್ತು? ರೇಣುಕಾಚಾರ್ಯ ವಿರುದ್ದ ಏನ್ ಕ್ರಮ ಆಗಿದೆ. ರಾಜ್ಯದ ನಾಯಕರಿಗೆ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು.

 

ರಾಜು ಕಪನೂರು ಪ್ರಿಯಾಂಕ್ ಖರ್ಗೆ ಜೊತೆ ಇದ್ದ ಫೋಟೋ ರಿಲೀಸ್ ಮಾಡಿದ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಚಿವರು, ರಾಜು ಕಪನೂರು ಬಿಜೆಪಿ ನಾಯಕರ ಜೊತೆ ಇದ್ದ ಫೋಟೋ ಬಿಡುಗಡೆ ಮಾಡಿದರು. ರಾಜು ಕಪನೂರು ಬಿಜೆಪಿಯಲ್ಲಿ ಮೊದಲು ಇದ್ದರು. ಫೋಟೋ ಹಲವಾರು ಇವೆ‌. ಆದರೆ ಸತ್ಯ ಏನು? ರಾಜು ಕಪನೂರು ಪರಿಚಯ ಇಲ್ಲ ಅಂತ ನಾವು ಹೇಳಿಲ್ಲ. ನಟಿಯರ ಡ್ರಗ್ ಕೇಸ್ ನಲ್ಲಿ ನಟಿ ವಿಪಕ್ಷ ನಾಯಕ ಅಶೋಕ್ ಜೊತೆ ನಟಿಯರ ಫೋಟೋ ಇತ್ತು. ಹಾಗಾದ್ರೆ ಅದಕ್ಕೆ ಅಶೋಕ್ ಸಂಬಂಧ ಹೇಳೋಕೆ ಆಗುತ್ತಾ? ಫೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅಕ್ರಮ ಹಣ ದುರ್ಬಳಕೆ ಪ್ರಕರಣದಲ್ಲಿ ವಿಜಯೇಂದ್ರ ಯಾಕೆ ರಾಜೀನಾಮೆ ಕೊಟ್ಟಿಲ್ಲ. ಮೊದಲು ನಿಮ್ಮ ನಾಯಕರಿಗೆ  ನೋಟಿಸ್‌ ಕೊಡಿ ಅಂತ ಕಿಡಿಕಾರಿದರು.

 

Share This Article