ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ರಣರೋಚಕ ಹಂತಕ್ಕೆ ತಲುಪಿದೆ. 4ನೇ ದಿನದ ಕೊನೇ ಓವರ್‌ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ನೋಬಾಲ್ ಎಡವಟ್ಟಿನಿಂದ 1 ವಿಕೆಟ್ ಬಾಕಿ ಉಳಿಸಿಕೊಂಡಿರುವ ಆಸ್ಟ್ರೇಲಿಯಾ (Australia) ತಂಡ 82 ಓವರ್‌ಗಳಲ್ಲಿ 228 ರನ್ ಗಳಿಸಿ, 333 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭದಲ್ಲೇ ಉರಿ ಚೆಂಡಿನ ದಾಳಿ ನಡೆಸಿ ಅಗ್ರ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟಿದ ಬುಮ್ರಾ ದಿನದ ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಕೆಟ್ ಕಿತ್ತು ಆಲೌಟ್ ಮಾಡಿದ್ದರು. ಆದ್ರೆ ಅದು ನೋಬಾಲ್ ಆದ ಪರಿಣಾಮ ಆಲೌಟ್‌ನಿಂದ ಆಸೀಸ್ ಪಾರಾಯಿತು. ಹೀಗಾಗಿ ಕೊನೆಯ ದಿನ ಆಸೀಸ್ ವಿರುದ್ಧ ಗೆಲ್ಲುವುದು ಕಠಿಣ ಸವಾಲಿನ ಕೆಲಸವಾಗಿದೆ. ಈ ಪಂದ್ಯದ ಗೆಲುವಿನ ಮೇಲೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ (WTC Final) ಅರ್ಹತೆ ಪಡೆಯಲಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಹೌದು. ಮೆಲ್ಬೋರ್ನ್ (Melbourne) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಆಸೀಸ್ ನಡುವೆ ಹಣಾ-ಹಣಿ ನಡೆಯುತ್ತಿದೆ. ನಾಲ್ಕನೇ ದಿನದ ಅಂತ್ಯಕ್ಕೆ 9 ವಿಕೆಟ್‌ನಷ್ಟಕ್ಕೆ 228 ರನ್ ಗಳಿಸಿರುವ ಆಸ್ಟ್ರೇಲಿಯಾ 333 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಆಸೀಸ್ ಬ್ಯಾಟರ್‌ಗಳಾದ ನಥಾನ್ ಲಿಯಾನ್ (Nathan Lyon), ಸ್ಕಾಟ್ ಬೊಲ್ಯಾಂಡ್ 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
3ನೇ ದಿನದ ಅಂತ್ಯಕ್ಕೆ 9 ನಷ್ಟಕ್ಕೆ 358 ರನ್ ಗಳಿಸಿದ್ದ ಭಾರತ (Team India) 4ನೇ ದಿನದ ಆರಂಭದಲ್ಲಿ 11 ರನ್ ಗಳಿಸುವಷ್ಟರಲ್ಲಿ ಕೊನೆಯ ವಿಕೆಟ್ ಕಳೆದುಕೊಂಡು, 369 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಕ್ರೀಸ್ ಆರಂಭಿಸಿದ ಆಸೀಸ್ 91 ರನ್‌ಗಳಿಗೆ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ನಡುವೆ ನಾಯಕ ಪ್ಯಾಟ್ ಕಮ್ಮಿನ್ಸ್ – ಮಾರ್ನಸ್ ಲಾಬುಶೇನ್ ಹಾಗೂ ಮುರಿಯದ ಕೊನೆಯ ವಿಕೆಟಿಗೆ ನಥಾನ್ ಲಿಯಾನ್ – ಸ್ಕಾಟ್ ಬೊಲ್ಯಾಂಡ್ ಅವರ ಅರ್ಧಶತಕಗಳ ಜೊತೆಯಾಟ ತಂಡಕ್ಕೆ ಶಕ್ತಿ ತುಂಬಿತು. ಪರಿಣಾಮ ಆಸೀಸ್ 82 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್‌ಗಳಿಸಿದ ಆಸ್ಟ್ರೇಲಿಯಾ 333 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಬುಮ್ರಾ ಬೆಂಕಿ ಚೆಂಡು:
4ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಮರ ಸಾರಿದ ಜಸ್ಪ್ರೀತ್ ಬುಮ್ರಾ ಟಾಪ್-ಬ್ಯಾಟರ್‌ಗಳಿಗೆ ಪೆವಲಿಯನ್ ಹಾದಿ ತೋರುವಲ್ಲಿ ಯಶಸ್ವಿಯಾದರು. ಬುನ್ರಾ ಬೆಂಕಿ ಚೆಂಡಿನ ದಾಳಿಗೆ ಅಸೀಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಇನ್ನು ಆಸೀಸ್ ವಿರುದ್ಧ ಬುಮ್ರಾ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು.
2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಪರ ಮಾರ್ನಸ್ ಲಾಬುಶೇನ್ 70 ರನ್ (139 ಎಸೆತ, 3 ಬೌಂಡರಿ) ಗಳಿಸಿದ್ರೆ, ಪ್ಯಾಟ್ ಕಮ್ಮಿನ್ಸ್ 41 ರನ್, ಉಸ್ಮಾಣ ಖವಾಜ 21 ರನ್, ಸ್ಯಾಮ್ ಕಾನ್ಸ್‌ಸ್ಟಾಸ್ 8 ರನ್, ಟ್ರಾವಿಸ್ ಹೆಡ್ 1 ರನ್, ಅಲೆಕ್ಸ್ ಕ್ಯಾರಿ 2 ರನ್ ಗಳಿಸಿದ್ರೆ ಮಿಚೆಲ್ ಮಾರ್ಷ್ ಶೂನ್ಯ ಸುತ್ತಿದರು. ದಿನದ ಅಂತ್ಯದ ವರೆಗೂ ವಿಕೆಟ್ ಬಿಟ್ಟುಕೊಡದ ನಥಾನ್ ಲಿಯಾನ್ 41 ರನ್, ಸ್ಕಾಟ್ ಬೊಲ್ಯಾಂಡ್ 10 ರನ್ ಗಳಿಸಿದ್ದು, 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬುಮ್ರಾ ಬೆಂಕಿ ಚೆಂಡಿಗೆ ದಾಖಲೆಗಳು ಉಡೀಸ್:
ಭಾರತದ ಪರ 200 ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್ಸ್
37 ಪಂದ್ಯ, ರವಿಚಂದ್ರನ್ ಅಶ್ವಿನ್
44 ಪಂದ್ಯ, ಜಸ್ಪ್ರಿತ್ ಬುಮ್ರಾ
44 ಪಂದ್ಯ, ರವೀಂದ್ರ ಜಡೇಜಾ
46 ಪಂದ್ಯ, ಹರ್ಭಜನ್ ಸಿಂಗ್
47 ಪಂದ್ಯ, ಅನಿಲ್ ಕುಂಬ್ಳೆ
ಅತಿ ಕಡಿಮೆ ಸರಾಸರಿ ಹೊಂದಿರುವ ಬೌಲರ್ಸ್
ಜಸ್ಪ್ರೀತ್ ಬುಮ್ರಾ, 19.56 ಸರಾಸರಿ
ಜಯೋಲ್ ಗಾರ್ನರ್, 20.34 ಸರಾಸರಿ
ಶಾನ್ ಪೊಲಾಕ್, 20.39 ಸರಾಸರಿ
ವಕಾರ್ ಯೂನಿಸ್, 20.61 ಸರಾಸರಿ
ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್‌ಗಳು
ವಕಾರ್ ಯೂನಿಸ್, 7725 ಎಸೆತಗಳು
ಡೇಲ್ ಸ್ಟೇಯ್ನ್, 7848 ಎಸೆತಗಳು
ಕಗಿಸೊ ರಬಾಡ, 8153 ಎಸೆತಗಳು
ಜಸ್ಪ್ರೀತ್ ಬುಮ್ರಾ, 8484 ಎಸೆತಗಳು