ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

Public TV
3 Min Read
Narendra Modi

– ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ ದೇಣಿಗೆ
– ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆ
– ಪ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ನಿಂದ ಬಿಜೆಪಿಗೆ 723.6 ಕೋಟಿ ರೂ.

ನವದೆಹಲಿ: 2023-24 ಹಣಕಾಸು ವರ್ಷದಲ್ಲಿ ಬಿಜೆಪಿ (BJP) ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ (Congress) 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.

ಭಾರತೀಯ ಚುನಾವಣಾ ಆಯೋಗ (ECI) ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್‌ ಮಾಡಿದೆ. 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ 79.92 ಕೋಟಿ ರೂ. ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ.

Rahul Gandhi priyanka vadra

ಯಾವ ಪಕ್ಷಕ್ಕೆ ಎಷ್ಟು ಕೋಟಿ ರೂ.?
ಬಿಜೆಪಿ – 2244
* ಬಿಆರ್‌ಎಸ್‌ – 580
ಕಾಂಗ್ರೆಸ್‌ -289
*ವೈಎಸ್‌ಆರ್‌ಸಿಪಿ – 184
ಟಿಡಿಪಿ – 100
ಡಿಎಂಕೆ – 60
ಎಎಪಿ – 11
ಟಿಎಂಸಿ – 6
* ಎಲೆಕ್ಟೋರಲ್‌ ಬಾಂಡ್‌ ಸೇರಿ

KCR

ಬಿಜೆಪಿ ಪ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ನಿಂದ (Prudent Electoral Trust) 723.6 ಕೋಟಿ ರೂ. ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಒಂದೇ ಟ್ರಸ್ಟ್‌ನಿಂದ ಬಂದಿರುವುದು ವಿಶೇಷ. ಪ್ರುಡೆಂಟ್ ಬಿಆರ್‌ಎಸ್‌ ಮತ್ತು ವೈಎಸ್‌ಆರ್‌ಪಿಸಿಗೆ ಕ್ರಮವಾಗಿ 85 ಕೋಟಿ ರೂ. ಮತ್ತು 62.5 ಕೋಟಿ ರೂ. ನೀಡಿದೆ. ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾ ಲಿಮಿಟೆಡ್, ಸೀರಂ ಇನ್‌ಸ್ಟಿಟ್ಯೂಟ್‌, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ. ‌ ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್‌ 127 ಕೋಟಿ ರೂ., ಐಂಜಿಗಾರ್ಟಿಂಗ್ ಎಲೆಕ್ಟೋರಲ್ ಟ್ರಸ್ಟ್‌ 17.2 ಲಕ್ಷ ರೂ. ಹಣವನ್ನು ಬಿಜೆಪಿಗೆ ನೀಡಿದೆ. ಇದನ್ನೂ ಓದಿ: 6 ಜನರನ್ನು ಮದುವೆಯಾಗಿ ಹಣ, ಚಿನ್ನ ಕಳ್ಳತನ – 7ನೇ ಮ್ಯಾರೇಜ್‌ಗೆ ರೆಡಿಯಾಗಿದ್ದ ಲೇಡಿ ಅರೆಸ್ಟ್‌!

santiga martin
ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್

ಭಾರತದ ‘ಲಾಟರಿ ಕಿಂಗ್’ ಎಂದೇ ಹೆಸರುವಾಸಿಯಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಕಂಪನಿಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ 2023-24ರಲ್ಲಿ ಬಿಜೆಪಿಗೆ 3 ಕೋಟಿ ರೂ. ದೇಣಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಚುನಾವಣಾ ಬಾಂಡ್‌ಗಳ ಮಾರ್ಗದ ಟಿಎಂಸಿಗೆ 1,610 ಕೋಟಿ ರೂ. ದೇಣಿಗೆ ನೀಡಿತ್ತು. ಸದ್ಯ ಸ್ಯಾಂಟಿಯಾಗೋ ಮಾರ್ಟಿನ್‌ ಒಡೆತನದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ನಡೆಯುತ್ತಿದೆ.

2019 ಲೋಕಸಭಾ ಚುನಾವಣೆಯ ಸಮಯದಲ್ಲೂ ಬಿಜೆಪಿಗೆ ಹೆಚ್ಚಿನ ದೇಣಿಗೆ ಸಿಕ್ಕಿತ್ತು. 2018-19ರ ಅವಧಿಯಲ್ಲಿ ಬಿಜೆಪಿ 742 ಕೋಟಿ ರೂ. ಮತ್ತು ಕಾಂಗ್ರೆಸ್‌ 146.8 ಕೋಟಿ ರೂ. ದೇಣಿಗೆ ಸಿಕ್ಕಿದೆ ಎಂದು ಘೋಷಿಸಿಕೊಂಡಿತ್ತು.

ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

supreme Court 1

ರದ್ದಾಗಿತ್ತು ಚುನಾವಣಾ ಬಾಂಡ್‌:
2017–18ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ (Electoral Bonds)ಪರಿಚಯಿಸಿತ್ತು. ಚುನಾವಣಾ ಬಾಂಡ್‌ ಅಕ್ರಮ ಎಂದು ಹೇಳಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 2024ರ ಫೆಬ್ರವರಿಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾಗಿದೆ. ಗಂಭೀರ ನ್ಯೂನತೆಗಳನ್ನು ಹೊಂದಿದ್ದು ಪಾರದರ್ಶಕತೆಯಿಂದಲೂ ಕೂಡಿಲ್ಲ ಎಂದು ಹೇಳಿ ರದ್ದುಗೊಳಿಸಿತ್ತು.

ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ರಾಜಕೀಯ ಪಕ್ಷಗಳಿಗೆ ಇರಲಿಲ್ಲ.

2018 ಹಾಗೂ ಮಾರ್ಚ್‌ 2023ರ ನಡುವೆ ಈ ಬಾಂಡ್‌ಗಳ ಮೂಲಕ ಬಿಜೆಪಿಗೆ 5,271 ಕೋಟಿ ರೂ. ಬಂದಿದ್ದರೆ ಕಾಂಗ್ರೆಸ್‌ಗೆ 952 ಕೋಟಿ ರೂ. ದೇಣಿಗೆ ಬಂದಿತ್ತು.

 

Share This Article