ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ – ಏಸುವಿನ ಸಂದೇಶ

Public TV
2 Min Read
JESUS

ವಿಶ್ವದಾದ್ಯಂತ ಡಿಸೆಂಬರ್‌ 25ರಂದು ಜಾತಿ, ಧರ್ಮಗಳನ್ನು ಮೀರಿ ಆಚರಿಸಲಾಗುವ ಕ್ರಿಸ್‌ಮಸ್‌ ಅನ್ನು ಭಾರತದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ರಿಸ್‌ ಎಂಬುದು ಏಸುವಿನ ಹೆಸರಾದರೆ, ಮಾಸ್‌ ಎಂಬುದು ಪ್ರಾರ್ಥಿಸುವ ಸಮೂಹವನ್ನು ಪ್ರತಿನಿಧಿಸುತ್ತದೆ. ಇವೆರಡು ಪದಗಳು ಒಂದಾದಾಗ ಕ್ರಿಸ್‌ಮಸ್‌ ಆಗುತ್ತದೆ!

ಏಸುವಿನ ಸಂದೇಶ: ಏಸು ತನ್ನ 12ನೇ ವಯಸ್ಸಿನಲ್ಲೇ ಬೋಧಕರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗುತ್ತಿದ್ದ. 18ನೇ ವಯಸ್ಸಲ್ಲಿ ದೀಕ್ಷೆ ಪಡೆದು, ಬೋಧನೆಯಲ್ಲಿ ತೊಡಗಿಸಿಕೊಂಡ. ಜನರಿಗೆ ಸಂದೇಶವನ್ನು ನೀಡುವ ಜೊತೆಗೇ ಏಸು ಅನೇಕ ಪವಾಡಗಳನ್ನು ಮಾಡಿದ.

JESUS 2

ಏಸು ಅನೇಕ ರೋಗಿಗಳನ್ನು ಗುಣಪಡಿಸಿದ, ಆಹಾರ ಸಾಮಗ್ರಿಗಳ ಕೊರತೆಯಿದ್ದರೂ ಅದನ್ನೇ ಅಕ್ಷಯವಾಗಿಸಿ ಸಾವಿರಾರು ಜನರಿಗೆ ಊಟ ನೀಡಿದ. ಸತ್ತವರಿಗೆ ಪುನರ್‌ಜನ್ಮ ನೀಡಿದ. ಇಂತಹ ಪವಾಡಗಳಿಂದ ಆತ ಸಾಮಾನ್ಯ ವ್ಯಕ್ತಿ ಅಲ್ಲ ಎಂಬ ತೀರ್ಮಾನಕ್ಕೆ ಬಂದರು.

ಏಸುವಿನ ಸಂದೇಶ ಅತ್ಯಂತ ನೇರ ಮತ್ತು ಸರಳವಾಗಿತ್ತು. ಆತ ಹೇಳುತ್ತಿದ್ದ ನೀತಿ ಕತೆಗಳು ಮತ್ತು ಹೇಳಿಕೆಗಳು ಜನರನ್ನು ಬಹಳ ಆಕರ್ಷಿಸಿಸುತ್ತಿದ್ದವು. ಆತ ಬೋಧಿಸಿದ ಮಹಾನ್‌ ಬೋಧನೆ ಪ್ರೀತಿಯೇ ಆಗಿತ್ತು. ಭಗವಂತನನ್ನು ಹೃದಯದಿಂದ ಪ್ರೀತಿಸಿ, ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ. ಪ್ರೀತಿಯೇ ಜೀವನ, ಇದರಿಂದಲೇ ಭಗವಂತನನ್ನು ತಲುಪಲು ಸಾಧ್ಯ ಎಂದು ಏಸು ಸಂದೇಶ ಕೊಟ್ಟರು.

JESUS 1

ಶಾಂತಿದೂತ: ಜನರ ಸೇವೆಯೇ ಶ್ರೇಷ್ಠ ಧರ್ಮವೆಂದು ಏಸು ಹೇಳಿದ. ಭೌತಿಕಕ್ಕಿಂತ ಆಧ್ಯಾತ್ಮಿಕತೆಯು ಹೆಚ್ಚು ಮುಖ್ಯವೆಂದ. ಪಾಪವನ್ನು ದ್ವೇಷಿಸಿ ಆದರೆ ಪಾಪಿಯನ್ನಲ್ಲ ಎಂಬ ಸಂದೇಶ ಸಾರಿದ. ೀ ಮೂಲಕ ಆತ ಶಾಂತಿದೂತನಾದ. ಇದು ಕೇವಲ ಬೋಧನೆಯಾಗಿರಲಿಲ್ಲ. ಆತ ಸ್ವತಃ ಇವುಗಳನ್ನು ಪಾಲಿಸಿ ತೋರಿಸಿದ. ಆತನನ್ನೇ ಶಿಲುಬೆಗೆ ಏರಿಸಿದ ಜನರನ್ನೂ ಕ್ಷಮಿಸಿದ. ಈ ಮೂಲಕ ಜಗತ್ತಿಗೆ ಕ್ಷಮೆ ಹಾಗೂ ಪ್ರೀತಿಯ ಸಂದೇಶ ಸಾರಿದ.

ಏಸುವಿನ ಜನನ: ಏಸುಕ್ರಿಸ್ತನ ಜನನಕ್ಕೆ ಸಂಬಂಧಿಸಿದಂತೆ ಕೆಲವು ಕತೆಗಳಿವೆ. ದೇವದೂತ ಗೇಬ್ರಿಯಲ್ ಏಸುವಿನ ತಾಯಿ ಮೇರಿಯನ್ನು ಭೇಟಿಯಾಗಿ, ಪಾಪಗಳಿಂದ ಜನರನ್ನು ರಕ್ಷಿಸಲು ಪವಿತ್ರಾತ್ಮವು ಅವಳ ಮಗನಾಗಿ ಜನಿಸುತ್ತಾನೆ. ಆ ಮಗುವಿಗೆ ಏಸು ಎಂದು ಹೆಸರಿಡಬೇಕೆಂದೂ ಸೂಚಿಸುತ್ತಾನೆ.

ಅದೇ ವೇಳೆಗೆ, ಪ್ರತಿಯೊಬ್ಬ ಪ್ರಜೆಯೂ ತಾವು ಹುಟ್ಟಿದ ಸ್ಥಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ರೋಮನ್‌ ಚಕ್ರವರ್ತಿ ಮಾಡಿದ್ದ ಆದೇಶವನ್ನು ಪಾಲಿಸಲು, ಬೆಥ್ಲೆಹೆಮ್‌ನಲ್ಲಿ ಜನಿಸಿದ್ದ ಜೋಸೆಫ್‌, ನಜರೇತ್‌ ಪಟ್ಟಣದಿಂದ ಅಲ್ಲಿಗೆ ಪ್ರಯಾಣಿಸಬೇಕಾಯಿತು. ಆತನೊಂದಿಗೆ ಗರ್ಭವತಿ ಪತ್ನಿ ಮೇರಿಯೂ ಇದ್ದಳು. ದಂಪತಿ ಅಲ್ಲಿಗೆ ಆಗಮಿಸಿದಾಗ ರಾತ್ರಿಯಾಗಿತ್ತು. ಅವರಿಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ಲ. ಈ ವೇಳೆ ಕುದುರೆ ಲಾಯದಲ್ಲಿ ಉಳಿದುಕೊಂಡಿದ್ದರು. ಆಗಲೇ ಏಸುವಿನ ಜನನವಾಯಿತು ಎನ್ನಲಾಗುತ್ತದೆ.

Share This Article