ಯಾವುದೇ ಕ್ಷಣದಲ್ಲಿ ಆರೋಪಿ ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

Public TV
1 Min Read
Darshan 3

ಬೆಂಗಳೂರು: ಬೆನ್ನುನೋವಿನಿಂದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿ ನಟ ದರ್ಶನ್‌ (Darshan) ಇಂದು ಯಾವುದೇ ಕ್ಷಣದಲ್ಲಿ ಡಿಸ್ಚಾರ್ಜ್‌ ಆಗುವ ಸಾಧ್ಯತೆಗಳಿವೆ. ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ (Surgery) ಪಡೆಯದೇ 49 ದಿನಗಳ ನಂತರ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

ದರ್ಶನ್‌ ಕುಟುಂಬ ಫಿಸಿಯೋಥೆರಪಿ ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲ್ಯಾನ್‌ ಮಾಡಿದೆ, ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸುತ್ತಿದ್ದಾರೆ. ಆಸ್ಪತ್ರೆಯ ಬಿಲ್‌ ಸೇರಿದಂತೆ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Darshan 4

ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಅವರು KA-03 NT-6633 ರೇಂಜ್ ರೋವರ್ ಕಾರಿನಲ್ಲಿ ಆಗಮಿಸಿದ್ದು, ಆಸ್ಪತ್ರೆ ಆವರಣದಲ್ಲಿದ್ದಾರೆ. ಇದರೊಂದಿಗೆ ದರ್ಶನ್‌ ಪುತ್ರ, ನಟ ಧನ್ವೀರ್, ಸಹೋದರ ದಿನಕರ್ ಸಹ ಅಸ್ಪತ್ರೆ ಆವರಣದಲ್ಲೇ ಬೀಡುಬಿಟ್ಟಿದ್ದಾರೆ. ದರ್ಶನ್‌ ಡಿಸ್ಚಾರ್ಜ್‌ ಆಗುತ್ತಿದ್ದಂತೆ ನೇರ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‌ ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿ.11ಕ್ಕೆ ಜಾಮೀನು ಅವಧಿ ಮುಕ್ತಾಯವಾದರೂ, ಅವಧಿ ವಿಸ್ತರಣೆ ಮಾಡಿತ್ತು. ಡಿ.13ರಂದು ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತು.

ಜಾಮೀನು ಸಿಕ್ಕಿದ್ದು ಹೇಗೆ?
ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತು.

Share This Article