ಸಂಸತ್‌ಗೆ ಪ್ಯಾಲೆಸ್ತೀನ್ ಬ್ಯಾಗ್‌ ಹಾಕಿಕೊಂಡು ಬಂದ ಪ್ರಿಯಾಂಕಾ – ಎಲ್ಲಾ ಸುದ್ದಿಗಾಗಿ ಎಂದ ಬಿಜೆಪಿ ಸಂಸದ

Public TV
1 Min Read
Priyanka Gandhi

ನವದೆಹಲಿ: ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಸೋಮವಾರ ಸಂಸತ್ತಿಗೆ (Parliament) ಪ್ಯಾಲೆಸ್ತೀನ್ (Palestine) ಎಂದು ಬರೆದಿರುವ ಬ್ಯಾಗ್‌ನ್ನು ತೆಗೆದುಕೊಂಡು ಹೋಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.

ಪ್ಯಾಲೇಸ್ತೀನಿನ ಜನ ಒಗ್ಗಟ್ಟಿನ ಸಂಕೇತವಾಗಿ ಕಾಣುವ ಕಲ್ಲಂಗಡಿ ಹಣ್ಣಿನ ಚಿತ್ರ ಅವರ ಚೀಲದಲ್ಲಿ ಕಾಣಿಸಿಕೊಂಡಿದೆ. ಇನ್ನೂ ಕಳೆದ ವಾರ ದೆಹಲಿಯಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಅಬೇದ್ ಎಲ್ರಾಜೆಗ್ ಅಬು ಜಾಜರ್ ಅವರನ್ನು ಭೇಟಿಯಾಗಿದ್ದರು.

ಪ್ರಿಯಾಂಕ ಗಾಂಧಿ ನಡೆಗೆ ಬಿಜೆಪಿ ಸಂಸದ ಗುಲಾಂ ಅಲಿ ಖತಾನಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಸುದ್ದಿಗಾಗಿ ಇಂತಹ ಕೆಲಸಗಳನ್ನು ಮಾಡುತ್ತಾರೆ. ಜನರಿಂದ ತಿರಸ್ಕರಿಸಲ್ಪಟ್ಟಾಗ, ಅವರು ಅಂತಹ ಕ್ರಮಗಳನ್ನು ಆಶ್ರಯಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ದಾಳಿಯ ವಿರುದ್ಧ ಪ್ರಿಯಾಂಕಾ ಗಾಂಧಿ ಧ್ವನಿ ಎತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್ ಸರ್ಕಾರ ನರಹಂತಕ ಕ್ರಮಗಳನ್ನು ಕೈಗೊಂಡಿದೆ ಎಂದು ಈ ಹಿಂದೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದರು.

ಇಸ್ರೇಲ್ ಸರ್ಕಾರದ‌ ಕ್ರಮವನ್ನು ಖಂಡಿಸುವುದು ವಿಶ್ವದ ಪ್ರತಿಯೊಂದು ದೇಶದ ಸರ್ಕಾರವೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಜವಾಬ್ದಾರಿ ಎಂದು ಅವರು ಹೇಳಿದ್ದರು.

ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಗೆಲುವು ಸಾಧಿಸಿದ್ದು, ತಮ್ಮ ಚೊಚ್ಚಲ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.

Share This Article