ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೆಂಕುತಿಟ್ಟು ಯಕ್ಷಗಾನದ (Yakashanga) ಮೊದಲ ವೃತ್ತಿಪರ ಮಹಿಳಾ ಭಾಗವತರಾಗಿದ್ದ ಲೀಲಾವತಿ ಬೈಪಾಡಿತ್ತಾಯ(77) ಶನಿವಾರ ವಿಧಿವಶರಾಗಿದ್ದಾರೆ.
ಅವರು ಪತಿ, ಖ್ಯಾತ ಹಿಮ್ಮೇಳವಾದಕ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಪುತ್ರ ಪತ್ರಕರ್ತ, ಹವ್ಯಾಸಿ ಕಲಾವಿದ ಅವಿನಾಶ್ ಬೈಪಾಡಿತ್ತಾಯ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23 ರಂದು ಜನಿಸಿದ ಲೀಲಾವತಿ ಬೈಪಾಡಿತ್ತಾಯರು (Leelavathi Baipadithaya) ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಸಂವಿಧಾನ ಶಿಕಾರಿ..75 ಬಾರಿ ಬದಲಾವಣೆ| ನೆಹರು ಟು ರಾಹುಲ್ – ಉದಾಹರಣೆಯೊಂದಿಗೆ ತಿವಿದ ಮೋದಿ
ಬಡತನದಿಂದಾಗಿ ಶಾಲೆಗೆ ಹೋಗದ ಇವರು ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡಿದ್ದರು. ಹಿಂದಿ ವಿಶಾರದ ಕೂಡ ಆಗಿದ್ದರು. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ ಯಕ್ಷಗಾನದ ಪಾಠ ಆರಂಭವಾಗಿತ್ತು.
ಪತಿಯೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.
ಲೀಲಾವತಿಯವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ 2010 ರಲ್ಲಿ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. 2012ರಲ್ಲಿ ಕರ್ನಾಟಕ ಸರ್ಕಾರ ನೀಡುವ ಹಿರಿಯ ನಾಗರಿಕರು ಪ್ರಶಸ್ತಿ, 2023ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ. ಆಳ್ವಾಸ್ ನುಡಿಸಿರಿ, ಉಳ್ಳಾಲ ಅಬ್ಬಕ್ಕ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನವನ್ನು ಪಡೆದಿದ್ದಾರೆ.
ಕೊಳಂಬೆಯ ತಲಕಳದ ನಿವಾಸಿಯಾಗಿದ್ದ ಲೀಲಾವತಿ ಅವರು ಮನೆಯಲ್ಲೇ ಅನೇಕ ಶಿಷ್ಯರಿಗೆ ಯಕ್ಷಗಾನದ ಜ್ಞಾನ, ಭಾಗವತಿಕೆಯ ಪಾಠ ಮಾಡುತ್ತಿದ್ದರು.