ಬಾಗಲಕೋಟೆ: ಅನ್ಯ ರಾಜ್ಯದ ವರ್ತಕರ ಹಾವಳಿ ತಡೆಯಲು ಹಾಗೂ ಅವರಿಗೆ ನಿರ್ಬಂಧ ಹೇರಲು ಆಗ್ರಹಿಸಿ ಸ್ಥಳೀಯ ವ್ಯಾಪಾರಸ್ಥರು ಸೋಮವಾರ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ (Bilagi) ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯ ವ್ಯಾಪಾರಸ್ಥರು, ಬೀಳಗಿ ಪಟ್ಟಣದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿ, ಎಲ್ಲ ರೀತಿಯ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳ ವ್ಯವಹಾರಕ್ಕೆ ಸಮಸ್ಯೆ ಆಗುತ್ತಿದೆ. ಬಂದ್ ಕರೆಗೆ ಸ್ಥಳೀಯ ವ್ಯಾಪಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ
ಮುಖಂಡ ಪ್ರವೀಣ್ ಗೌಡ ಪಾಟೀಲ್ ಮಾತನಾಡಿ, ಬೀಳಗಿ ಪಟ್ಟಣ ಹಿಂದುಳಿದ ತಾಲೂಕಾಗಿದ್ದು, ಪಟ್ಟಣದಲ್ಲಿ ಬಟ್ಟೆ, ಮೊಬೈಲ್ , ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್‌ವೇರ್, ಸ್ಟೀಲ್ ಸೇರಿದಂತೆ ಬಹುತೇಕ ಅಂಗಡಿಗಳನ್ನು ಅನ್ಯ ರಾಜ್ಯದವರೇ ಆಕ್ರಮಿಸಿದ್ದಾರೆ ಎಂದು ದೂರಿದರು.
ರಾಜಸ್ಥಾನ (Rajasthan) ಮತ್ತು ಕೇರಳದ (Kerala) ವ್ಯಾಪಾರಿಗಳು ಇಲ್ಲಿಗೆ ಬಂದು ಅತೀ ಹೆಚ್ಚು ಬಾಡಿಗೆ ಮತ್ತು ಡೆಪಾಸಿಟ್ ನೀಡಿ ಮಳಿಗೆಗಳನ್ನು ಪಡೆಯುತ್ತಾರೆ. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಪೆಟ್ಟು ಬೀಳುತ್ತಿದೆ. ಅಷ್ಟೇ ಅಲ್ಲದೇ ಸ್ಥಳೀಯರು ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸೋಮವಾರ ಬೀಳಗಿ ಕ್ರಾಸ್ ನಿಂದ ಬಸವೇಶ್ವರ ವೃತ್ತದವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಬಂದ್ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.