ಬೆಂಗಳೂರು| ಗಂಡನನ್ನು ಬಿಟ್ಟು ತನ್ನ ಜೊತೆ ಇರುವಂತೆ ಒತ್ತಾಯ – ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ

Public TV
1 Min Read
bengaluru murder

ಬೆಂಗಳೂರು: ಗಂಡನನ್ನು ಬಿಟ್ಟು ತನ್ನ ಜೊತೆ ಇರಲು ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆಯನ್ನು ಕೊಂದು ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ನಲ್ಲೂರ ಹಳ್ಳಿಯಲ್ಲಿ ನಡೆದಿದೆ.

ಮೊವುಹಾ ಮಂಡಲ್ (26) ಹತ್ಯೆಯಾದ ವಿವಾಹಿತೆ. ಮಿಥುನ್ ಮಂಡಲ್ (40) ಆತ್ಮಹತ್ಯೆಗೆ ಶರಣಾದ ಕೊಲೆ ಆರೋಪಿ. ಗಂಡನನ್ನ ತೊರೆದು ತನ್ನೊಂದಿಗೆ ಬರದಿದ್ದಕ್ಕೆ ಸಿಟ್ಟಿನಿಂದ‌ ಕೊಲೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಇಬ್ಬರೂ ಪಶ್ಚಿಮ ಬಂಗಾಳ ಮೂಲದವರು. ಮಿಥುನ್‌ ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಹೌಸ್ ಕೀಪಿಂಗ್ ಹಾಗೂ ಸೂಪರ್ ವೈಸರ್ ಆಗಿ ಮೊಹುವಾ ಕೆಲಸ ಮಾಡುತ್ತಿದ್ದ. ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನ ಪಿಜಿಯೊಂದರಲ್ಲಿ ನೆಲೆಸಿದ್ದ. ಕೆಲ ತಿಂಗಳ ಹಿಂದೆ ಮೊವುಹಾ ಮಂಡಲ್‌ ಪರಿಚಯವಾಗಿದೆ. ಈಕೆಯು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು.

ಐಟಿಪಿಎಲ್ ಬಳಿ ಮೊಹುವಾ ವಾಸವಾಗಿದ್ದಳು. ಆರು ತಿಂಗಳ ಹಿಂದೆ ಪರಿಚಿತರಾಗಿದ್ದ ಮೊವುಹಾ ಮಂಡಲ್‌ಗೆ ತನ್ನನ್ನ ಪ್ರೀತಿಸುವಂತೆ ಮಿಥುನ್ ಕೇಳಿಕೊಂಡಿದ್ದ. ತನಗೆ ಮದುವೆಯಾಗಿದೆ ಎಂದು ಹೇಳಿದರೂ ಗಂಡನನ್ನ ತೊರೆದು ತನ್ನ ಜೊತೆಯಿರುವಂತೆ ಒತ್ತಡ ಹೇರಿದ್ದ.‌ ಈತನ ಒತ್ತಡಕ್ಕೆ ಮಣಿಯದೆ ಆತನೊಂದಿಗೆ ಗಲಾಟೆ ಮಾಡಿಕೊಂಡಿದ್ದಳು. ಮಿಥುನ್ ಇದರಿಂದ ತಲೆಕೆಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಂದ ಕೈಸಾಲ ಪಡೆದಿದ್ದ.

ಪ್ರೀತಿಸಿದ್ದ ವಿವಾಹಿತೆಯನ್ನ ಒಲಿಸಿಕೊಳ್ಳಲು ವಿಫಲವಾಗಿ ಆಕೆ ಮೇಲೆ ಹಗೆತನ ಸಾಧಿಸಿದ್ದ. ಆಕೆಯನ್ನ ಸಾಯಿಸುವ ಸಂಚು ರೂಪಿಸಿದ್ದ. ಬುಧವಾರ ರಾತ್ರಿ ಆಕೆ ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ರಾತ್ರಿಯಿಡಿ ಶೋಧ ನಡೆಸಿದ್ದರು. ಇಂದು ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ಮಿಥುನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಪತ್ತೆಯಾಗಿದೆ.

ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಗೆ ನಿರಾಕರಿಸಿದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಕೊನೆಗೆ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share This Article