ಗದಗ: ಹಾಡಹಗಲೇ ನಡುಬೀದಿಯಲ್ಲಿ ಇಬ್ಬರು ಯುವಕರು ಚಾಕು ಸಮೇತ ಹೊಡೆದಾಡಿದ ಘಟನೆ ಗದಗ (Gadag) ನಗರದ ಚೆನ್ನಮ್ಮ ಸರ್ಕಲ್ ಬಳಿ ನಡೆದಿದೆ.
ಹಣಕಾಸು (Finance) ಹಾಗೂ ಕೌಟುಂಬಿಕ (Family) ವಿಚಾರವಾಗಿ ಫಕೀರೇಶ ನಂದಿಹಳ್ಳಿ ಹಾಗೂ ಗಂಗಾಧರ ಹಿರೇಮಠ ಕಿತ್ತಾಡಿದ್ದಾರೆ. ಈ ಇಬ್ಬರು ಮೂಲತಃ ಮುಂಡರಗಿ ತಾಲೂಕಿನ ಚಿರ್ಚಿಹಾಳ ಗ್ರಾಮದ ನಿವಾಸಿಗಳು. ಕಳೆದ ನಾಲ್ಕೈದು ವರ್ಷಗಳಿಂದ ಗದಗ ನಗರದ ಹುಡೋ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಇಬ್ಬರು ನಡುವೆ ಹಣಕಾಸು ವಿಚಾರವಾಗಿ ಆಗಾಗ ಗಲಾಟೆ ಆಗುತ್ತಿತ್ತು. ಇದರ ಜೊತೆಗೆ ಫಕೀರೇಶನ ಮಗಳು ಗಂಗಾಧರನ ಮನೆಗೆ ಬಂದು ತಂದೆ ಬಗ್ಗೆ ದೂರು ಹೇಳಿದ್ದಾಳೆ.
ನನ್ನ ತಾಯಿ ಹಾಗೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ವಿನಾಕಾರಣ ಕಿರುಕುಳ ಕೊಡ್ತಿದ್ದಾನೆ ಎಂದು ದೂರಿದ್ದಾಳೆ. ಇದರಿಂದ ಕೊಪಿತಗೊಂಡ ಗಂಗಾಧರ್ ಫಕೀರೇಶನೊಂದಿಗೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ನಂತರ ಒಬ್ಬರನೊಬ್ಬರು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆಗೆ ಕಾಂಗ್ರೆಸ್ ಜೊತೆ ಆಪ್ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್
ಗಲಾಟೆಯಲ್ಲಿ ಫಕೀರೇಶನ ಕುತ್ತಿಗೆ, ಮುಖ, ಎದೆಗೆ ಗಂಗಾಧರ್ ಎಂಬಾತ ಚಾಕು ಇರಿದಿದ್ದಾನೆ. ಫಕೀರೇಶನಿಗೆ ಗಂಭೀರ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಯಾವುದೇ ಭಯವೇ ಇಲ್ಲದೇ ಇಬ್ಬರು ಹೊಡೆದಾಡಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.