– ಆರ್‌ಟಿಪಿಸಿಆರ್ ಟೆಸ್ಟಿಂಗ್‌ನಲ್ಲಿ 500 ಕೋಟಿಗೂ ಹೆಚ್ಚು ಹಗರಣ ನಡೆದಿರುವ ಆರೋಪ
– ಕೋವಿಡ್ ಅಕ್ರಮಗಳ ತನಿಖೆಗೆ ಸಮಿತಿ ರಚಿಸಲು ಸಂಪುಟ
ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೋವಿಡ್ ತನಿಖೆ (Covid Investigation) ಬಿಸಿ ಕಾಯಿಸುವ ಆಟ. ನೀವು ಮುಡಾ, ವಕ್ಫ್ ಅಸ್ತ್ರ ಪ್ರಯೋಗ ಮಾಡಿದ್ರೆ ನಮ್ ಹತ್ರ ಕೋವಿಡ್ ಬ್ರಹ್ಮಾಸ್ತ್ರ ಇದೆ. ಇದು ಕಾಂಗ್ರೆಸ್ ಸರ್ಕಾರದ (Congress Government) ಗೇಮ್ ಪ್ಲ್ಯಾನ್.
ಹೌದು. ಜಸ್ಟೀಸ್ ಮೈಕಲ್ ಡಿ ಕುನ್ಹಾ ವರದಿ ಶಿಫಾರಸ್ಸುಗಳ ಜಾರಿ ವಿಚಾರವಾಗಿ ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಅಕ್ರಮಗಳ (Covid Scam) ಬಗ್ಗೆ ಇನ್ನಷ್ಟು ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ ಆರ್‌ಟಿಪಿಸಿಆರ್ ಟೆಸ್ಟ್‌ಕಿಟ್‌ನಲ್ಲಿ (RTPCR Testing) 500 ಕೋಟಿ ರೂ.ಗಿಂತಲೂ ಹೆಚ್ಚು ಹಗರಣ ಆಗಿದೆ. ಈ ಕುರಿತಂತೆಯೂ ತನಿಖೆಗೆ ವಹಿಸಲು ಸಂಪುಟ ಉಪಸಮಿತಿ ಸಭೆ ತೀರ್ಮಾನಿಸಿದೆ. ಒಟ್ಟಾರೆ ಇಂದಿನ ಉಪಸಮಿತಿ ಸಭೆಯಲ್ಲಾದ ಪ್ರಮುಖ ತೀರ್ಮಾನಗಳು ಈ ಕೆಳಕಂಡಂತಿವೆ.
ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್:
ಸಂಪುಟ ಉಪಸಮಿತಿ ಸಭೆಯಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ತೀರ್ಮಾನಿಸಲಾಗಿದೆ. ಅಂದಿನ ಸಚಿವರಿಂದ ವರದಿಯನ್ನು ತಿರಸ್ಕರಿಸಿದೆ. ಕೋವಿಡ್ ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಲ್ಲ, ಹಾಗಾಗಿ ಪ್ರಕರಣದ ಬಗ್ಗೆ ಮರು ತನಿಖೆಗೆ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದ್ದಾರೆ.
ಆರ್‌ಟಿಪಿಸಿಆರ್ ಟೆಸ್ಟ್ ಅಕ್ರಮ ತನಿಖೆ:
ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಸಿದ್ದ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‌ನಲ್ಲಿಯೂ ಅಕ್ರಮ ಆರೋಪ ಕೇಳಿಬಂದಿದೆ. 80 ಲಕ್ಷ ಆರ್‌ಟಿಪಿಸಿಆರ್ ಕಿಟ್‌ಗೆ 400 ಕೋಟಿ ರೂ. ಹಣ ಬಿಡುಗಡೆ ಆಗಿದೆ ಎನ್ನಲಾಗಿದೆ. ಅಲ್ಲದೆ ಕಿದ್ವಾಯಿ ಆಸ್ಪತ್ರೆಯಲ್ಲಿ 25 ಲಕ್ಷ ರೂ.ನಷ್ಟು ಅಕ್ರಮ ಆಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಧಿಕಾರಿಗಳ ಸಮಿತಿ ರಚನೆಗೆ ತೀರ್ಮಾನ:
ಕೋವಿಡ್ ಅಕ್ರಮಗಳ ತನಿಖೆ ವ್ಯಾಪ್ತಿ ನಿರ್ಧರಿಸಲು ಅಧಿಕಾರಿಗಳ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಲಿ, ನಿವೃತ್ತ ಅಧಿಕಾರಿಗಳ ಸಮಿತಿ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.