– 75 ಸಾವಿರ ಕೋಟಿ ಅನುದಾನವನ್ನು ನೀಡುವ ಭರವಸೆ ನೀಡಿದ್ದ ಸಿಎಂ
– ಎರಡು ಬಜೆಟ್ ಮಂಡನೆಯಾದ್ರೂ ಅನುದಾನ ಸಿಕ್ಕಿಲ್ಲ
ಬಾಗಲಕೋಟೆ: ಪಂಚ ಗ್ಯಾರಂಟಿಗಳಿಂದ (Congress Guarantee) ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಸಬೂಬು ಹೇಳಬೇಡಿ, ಬೆಂಗಳೂರಿನಲ್ಲಿರುವ (Bengaluru) ಒಂದು ಸರ್ಕಾರಿ ಆಸ್ತಿ ತೆಗೆದು ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆಗೆ (Upper Krishna Project) ದುಡ್ಡು ಕೊಡಿ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ (SR Patil) ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.
ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ, ಮುಳುಗಡೆ ಹಿತರಕ್ಷಣಾ ಸಮಿತಿ ವತಿಯಿಂದ ಬಾಗಲಕೋಟೆಯಲ್ಲಿ (Bagalkot) ಮಂಗಳವಾರ ಬೃಹತ್ ಹೋರಾಟದ ಧರಣಿ ಸತ್ಯಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಹೋರಾಟದಲ್ಲಿ ಸಾವಿರಾರು ರೈತರು ಎಲ್ಲಾ ಪಕ್ಷದ ನಾಯಕರು ಭಾಗವಹಿಸಿದ್ದರು.
ಹೋರಾಟದಲ್ಲಿ ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಆರ್ ಪಾಟೀಲ್, 1964 ರಲ್ಲಿ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿಂದ ಅಡಿಗಲ್ಲು ಹಾಕಿದ ನಂತರ ಕುಂಟುತ್ತಾ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಚುನಾವಣೆಗೂ ಮುನ್ನ ವಿಜಯಪುರದಲ್ಲಿ ಭಾಷಣ ಮಾಡುವ ವೇಳೆ ಈಗಿನ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 75 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದರು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗಾಗಿ ಪ್ರತೀ ವರ್ಷ 40 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿದ್ದರು. ಆದರೆ ಈಗ ಸರ್ಕಾರ ಬಂದು ಎರಡು ಬಜೆಟ್ ಆಗಿವೆ. ನೀರಾವರಿ ಯೋಜನೆಗೆ 40 ಸಾವಿರ ಕೋಟಿ ರೂ. ಇಟ್ಟಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿ ತಿಂಗಳು ಸರಿಯಾಗಿ ನಿಮಗೆ ಸಂಬಳ ಸಿಗುತ್ತಾ – ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೆಬ್ಬಾಳ್ಕರ್ ಮೊಂಡುವಾದ
ಯಾವುದೇ ಸರ್ಕಾರ ಬಂದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಸರಿಯಾಗಿ ಅನುದಾನವನ್ನು ನೀಡುತ್ತಿಲ್ಲ. ಹೀಗೆ ಆದರೆ ಯೋಜನಾ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಮನೆ ಮಠ ಜಮಿನುಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ ಎಂದರು.
ಯಾವುದೇ ಸರ್ಕಾರ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ದುಡ್ಡು ನೀಡುತ್ತಿಲ್ಲ. ಕೃಷ್ಣೆಗೆ ಈ ರೀತಿಯ ತಾತ್ಸಾರ ಯಾಕೆ ಎಂದು ಅಧಿಕಾರ ಅನುಭವಿಸಿದ ಮೂರು ಸರ್ಕಾರಗಳಿಗೂ ಪ್ರಶ್ನೆ ಮಾಡಿದರು.
ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಿನ ಸರ್ಕಾರ ಪಂಚ ಗ್ಯಾರಂಟಿ ಇಂದ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಸಬೂಬು ಹೇಳುವ ಬದಲು ಬೆಂಗಳೂರಿನಲ್ಲಿರುವ ಒಂದು ಸರ್ಕಾರಿ ಆಸ್ತಿಯನ್ನ ಮಾರಿ ನಮ್ಮ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ. ಟರ್ಫ್ ಕ್ಲಬ್, ರೇಸ್ ಕೋರ್ಸ್ ಮೈದಾನ ಹಾಗೂ ಗಾಲ್ಫ್ ಮೈದಾನ ತೆಗೆದರೆ 50 ಲಕ್ಷ ಕೋಟಿ ರೂ. ಬರುತ್ತದೆ. ಹೀಗೆ ನೂರರಷ್ಟು ಸರ್ಕಾರಿ ಆಸ್ತಿಗಳಿವೆ. ಅದರಲ್ಲಿ ಒಂದನ್ನು ತೆಗೆದು ಉತ್ತರ ಕರ್ನಾಟಕ ಭಾಗದ ಜನರ ಜೀವನ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ಕಟುವಾಗಿ ಆಗ್ರಹಿಸಿದರು.
ನಾನು ಹಿಂದೆ ವಿಪಕ್ಷ ನಾಯಕನಾಗಿದ್ದಾಗ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿಗಾಗಿ ಪಾದಯಾತ್ರೆ, ಟ್ರ್ಯಾಕ್ಟರ್ ರ‍್ಯಾಲಿ ಮಾಡಿ ಸದನದಲ್ಲಿ ಕೃಷ್ಣೆಗಾಗಿ ಅನುದಾನ ನೀಡುವಂತೆ ಆಗ್ರಹಿಸಿದ್ದೆ. ಕೃಷ್ಣೆಗಾಗಿ ಹೋರಾಟ ಮಾಡಿದ್ದಕ್ಕೆ ನಾನು ಸದನದಿಂದ ಹೊರ ಬರಬೇಕಾಯಿತು ಎಂದು ತಮಗೆ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡದ್ದಕ್ಕೆ ಪಕ್ಷದ ನಾಯಕರ ಬಗ್ಗೆ ಪರೋಕ್ಷ ಬೇಸರವನ್ನು ಹೊರಹಾಕಿದರು.
ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯೋಣ. ಉಪವಾಸ ಸತ್ಯಾಗ್ರಹ ಮಾಡೋಣ, ಅದಕ್ಕೂ ಬಗ್ಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ ಕೃಷ್ಣಾ ಕಾಮಗಾರಿಗೆ ದುಡ್ಡು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸೋಣ ಎಂದು ರೈತರಿಗೆ ಕರೆ ನೀಡಿದರು.