QR ಕೋಡ್‌ ಇಲ್ಲದ ಪಾನ್‌ ಕಾರ್ಡ್‌ ಮಾನ್ಯವೇ? ಪಾನ್‌ 2.0 ಯೋಜನೆ ಏನು? ಹೊಸ ಪಾನ್‌ ಪಡೆಯುವುದು ಹೇಗೆ?

Public TV
4 Min Read
Pan Card

ಪಾನ್‌ ಕಾರ್ಡ್‌ (PAN Card) ಸರ್ಕಾರ ಜಾರಿಗೊಳಿಸಿರುವ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಇಂದಿನ ದಿನಗಳಲ್ಲಿ ನಿಮ್ಮ ಯಾವುದೇ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಬೇಕಂದರೆ ಪಾನ್ ಕಾರ್ಡ್ ಅತ್ಯಗತ್ಯ. ಪಾನ್‌ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ಕೇಂದ್ರ ಸರ್ಕಾರ ಪಾನ್‌ 2.0 ಎಂಬ ಯೋಜನೆ ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿದೆ. ಆದಾಯ ಹೊಂದಿರುವ ಪ್ರತಿ ವ್ಯಕ್ತಿಯೂ ಇಂದು ದೇಶದಲ್ಲಿ ಪಾನ್ ಕಾರ್ಡ್ ಹೊಂದುವುದು ಅತೀ ಅಗತ್ಯವಾಗಿದೆ. ಅದೂ ಅಲ್ಲದೆ ಈಗಾಗಲೇ ಪಾನ್‌ ಕಾರ್ಡ್‌ ಆಧಾರ್‌ ಜೊತೆ ಲಿಂಕ್‌ ಮಾಡುವುದು ಕೂಡ ಅತ್ಯಗತ್ಯವಾಗಿದೆ. ಇದರ ನಡುವೆಯೇ ಇದೀಗ ಕೇಂದ್ರ ಸರ್ಕಾರ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಇನ್ನುಮುಂದೆ ಪ್ರತಿಯೊಂದು ಪಾನ್‌ ಕಾರ್ಡ್‌ನಲ್ಲೂ ಕ್ಯೂಆರ್‌ ಕೋಡ್‌ (QR Code) ಇರಲಿದೆ. ಹಾಗಿದ್ರೆ ಏನಿದು ಪಾನ್‌ 2.0 ಯೋಜನೆ? ಯಾರೆಲ್ಲಾ ಅರ್ಜಿ ಸಲ್ಲಿಸಬೇಕು? ಕ್ಯೂಆರ್‌ ಕೋಡ್‌ ಇಲ್ಲದ ಪಾನ್‌ ಹೊಂದಿರುವವರು ಅಪ್ಡೇಟ್‌ ಮಾಡಿಕೊಳ್ಳುವುದು ಹೇಗೆ ಎಂಬೆಲ್ಲಾ ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ.

ಏನಿದು ಪಾನ್‌ 2.0 ಯೋಜನೆ?
ಪಾನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ಹಾಗೂ ಹೆಚ್ಚುವರಿ ಸುರಕ್ಷತೆ, ಸುಲಭ ಹಾಗೂ ಸರಳ ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಹಲವು ಪ್ರಯೋಜನಗಳನ್ನುನೀಡಲು ಕೇಂದ್ರ ಸರ್ಕಾರ ಪಾನ್‌ 2.0 ಯೋಜನೆಗೆ ಅನುಮತಿ ನೀಡಿದೆ. ಇದಕ್ಕಾಗಿ ಕೇಂದ್ರ ಕ್ಯಾಬಿನೆಟ್ ಬರೋಬ್ಬರಿ 1,435 ಕೋಟಿ ರೂಪಾಯಿ ಮೀಸಲಿಟ್ಟಿದೆ. ಪಾನ್ 2.0 ಯೋಜನೆಯು ಎಲ್ಲಾ ಸರ್ಕಾರಿ ಡಿಜಿಟಲ್ ವ್ಯವಸ್ಥೆಗಳಲ್ಲಿ ಪಾನ್ ಸಂಖ್ಯೆಯನ್ನು ಸಾಮಾನ್ಯ ವ್ಯಾಪಾರ ಗುರುತಿಸುವಿಕೆಯನ್ನಾಗಿ ಮಾಡುವ ಗುರಿ ಹೊಂದಿದೆ. ಕ್ಯಾಬಿನೆಟ್ ಆರ್ಥಿಕ ವ್ಯವಹಾರಗಳ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯಡಿಯಲ್ಲಿ ಯೋಜನೆಗೆ ಅನುಮೋದನೆ ನೀಡಿದೆ.

Pan Card 1

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಅಸ್ತಿತ್ವದಲ್ಲಿರುವ ಪಾನ್ ಸಂಖ್ಯೆಗಳು ಮಾನ್ಯವಾಗಿರುತ್ತವೆ. ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಹಳೇ ಪಾನ್ ಕಾರ್ಡ್ ಇರುವವರು ಹೊಸ ಯೋಜನೆಯಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಹಳೇ ಕಾರ್ಡ್ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಈ ಹೊಸ ಪಾನ್ 2.0 ಕೇಂದ್ರ ಸರ್ಕಾರದ ಆಡಳಿತ ಪ್ರಾಜೆಕ್ಟ್ ಆಗಿದ್ದು ಲೇಟೆಸ್ಟ್ ಟೆಕ್ನಾಲಜಿಯ ಮೂಲಕ ತೆರಿಗೆದಾರರ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಆಧುನೀಕರಿಸಲು ವಿನ್ಯಾಸಗೊಳಿಸಲಾಗಿರುವ ಹೊಸ ಯೋಜನೆಯಾಗಿದೆ. ಭಾರತದಲ್ಲಿ ತೆರಿಗೆದಾರರ ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಪ್ಯಾನ್ ಕಾರ್ಡ್‌ಗಳಲ್ಲಿ (PAN Card) ಹೊಸ QR ಕೋಡ್ ವ್ಯವಸ್ಥೆಯನ್ನು ಅಳವಡಿಸಲು ಅಡ್ವಾನ್ಸ್ ಆವೃತ್ತಿಯಾದ ಪಾನ್ 2.0 ಅನ್ನು ಪರಿಚಯಿಸಿದೆ.

ಪಾನ್ ಕಾರ್ಡ್‌ಗಳಲ್ಲೂ QR ಕೋಡ್‌ಗಳನ್ನು ಪರಿಚಯಿಸಲಾಗುತ್ತದೆ. ಇದರಿಂದ ನಿಮ ಪ್ರತಿಯೊಂದು ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರಗಳ ಮೇಲೆ ಸರ್ಕಾರಿ ಸಂಸ್ಥೆಗಳು ಎಲ್ಲವನ್ನು ಡಿಜಿಟಲ್ ವ್ಯವಸ್ಥೆಗಳಿಗೆ ಮಾರ್ಪಡಿಸಿ ತನ್ನ ಕಣ್ಣ ಮುಂದೆ ಇಡುವ ಗುರಿಯನ್ನು ಹೊಂದಿದ್ದು ಇದರಿಂದ ಕಪ್ಪು ಹಣಕ್ಕೆ ಬ್ರೇಕ್ ಹಾಕಲಿದೆ.

ಕ್ಯೂಆರ್‌ ಕೋಡ್‌ ಇಲ್ಲದ ಪಾನ್‌ ಮಾನ್ಯವೇ?
ಅಸ್ತಿತ್ವದಲ್ಲಿರುವ ಪಾನ್ ಸಂಖ್ಯೆಗಳು ಮಾನ್ಯವಾಗಿರುತ್ತವೆ. ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಹಳೇ ಪಾನ್ ಕಾರ್ಡ್ ಇರುವವರು ಹೊಸ ಯೋಜನೆಯಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಹಳೇ ಕಾರ್ಡ್ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಅಪ್‌ಗ್ರೇಡ್ ಮಾಡಲಾದ ಪಾನ್ 2.0 ಕಾರ್ಡ್ QR ಕೋಡ್ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸದ್ಯ ಹಳೇ ಕಾರ್ಡ್ ಇರುವವರಿಗೂ ಹೊಸ ಕಾರ್ಡನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ ಹೊಸ ಕಾರ್ಡ್‌ಗಾಗಿ ಅರ್ಜಿ ಹಾಕುವುದು, ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಯೋಜನೆಯು ಪಾನ್ ಸೇವೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ.

Pan Card 2

ಪಾನ್ 2.0 ಯೋಜನೆಯಿಂದ ಡೇಟಾ ಮಾಹಿತಿ, ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಪಾನ್ ಸಂಬಂದಿಸಿದ ಕೆಲಸಗಳು ಅತೀ ಸುಲಭವಾಗಿ ನಡೆಯಲಿದೆ. ಈ ಯೋಜನೆಯು ಇ-ಆಡಳಿತ ವರ್ಧನೆಗಳು ಮತ್ತು PAN/TAN ಸೇವೆಗಳನ್ನು ಮರುವಿನ್ಯಾಸಗೊಳಿಸುವುದು, ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಸಂಯೋಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಅಪ್‌ಗ್ರೇಡ್ ಮಾಡಲು ಅರ್ಜಿ ಸಲ್ಲಿಸಬೇಕೇ?
ಪ್ರಸ್ತುತ ಕೇಂದ್ರ ಸರಕಾರದಿಂದ ಹೊರಡಿಸಿರುವ ಪ್ರಕಟಣೆಯನ್ವಯ ನಿಮ್ಮ ಬಳಿ ಇರುವ ಹಳೆಯ ಪಾನ್ ಕಾರ್ಡ್ ಅನ್ನು ಅಪ್‌ಗ್ರೇಡ್ ಮಾಡಲು ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಈಗಾಗಲೇ ದೇಶದಲ್ಲಿ 78 ಕೋಟಿಗೂ ಅಧಿಕ ಪಾನ್ ಕಾರ್ಡಗಳು ಅಸ್ತಿತ್ವದಲ್ಲಿದ್ದು ಈ ಎಲ್ಲಾ ಪಾನ್ ಕಾರ್ಡ್‌ಗಳನ್ನು ಉಚಿತವಾಗಿ ಕೇಂದ್ರ ಸರ್ಕಾರವು ಅಪ್‌ಗ್ರೇಡ್ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಯೋಜನಗಳೇನು?
-ಪಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡುವುದರಿಂದ ತೆರಿಗೆದಾರರ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸಹಾಯವಾಗುತ್ತದೆ.
-ಕ್ಯೂಆರ್ ಕೋಡ್ ತಾಂತ್ರಿಕತೆಯಿಂದಾಗಿ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಸಹಕಾರಿಯಾಗಿದೆ.
-ಸುಧಾರಿತ ಎನ್ಕ್ರಿಪ್ಶನ್ ತಾಂತ್ರಿಕತೆಯು ಈ ಕಾರ್ಡ್‌ನಲ್ಲಿ ಇರುವುದರಿಂದ ತೆರಿಗೆದಾರರ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತದೆ.
-ತ್ವರಿತವಾಗಿ ಹಣಕಾಸಿಗೆ ಸಂಬಂಧಪಟ್ಟ ವಹಿವಾಟನ್ನು ಮಾಡಲು ಈ ವಿಧಾನವು ನೆರವಾಗುತ್ತದೆ ಎಂದು ಯೋಜನೆಯ ಕುರಿತಾದ ಪ್ರಕಟಣೆಯಲ್ಲಿ ಉಲೇಖಿಸಲಾಗಿದೆ.

Pan Card 3

PAN 2.0ಗೆ ಯಾರಲ್ಲಾ ಅರ್ಹರು?
ಪಾನ್ ಕಾರ್ಡ್‌ ಹೊಂದಿರುವವರು ಎಲ್ಲರೂ ಕೂಡ PAN 2.0 ಅಪ್‌ಗ್ರೇಡ್‌ಗೆ ಅರ್ಹರಾಗಿರುತ್ತಾರೆ . ನೀವು ಈಗಾಗಲೇ ಪಾನ್ ಹೊಂದಿದ್ದರೆ, ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ನೀವು ಹೊಸ QR-ಕೋಡ್‌ಗಾಗಿ ವಿನಂತಿಸಬಹುದು. ಹಾಗೆ ಹೊಸದಾಗಿ ಅರ್ಜಿ ಸಲ್ಲಿಸುವವರು, ಮಾನ್ಯವಾದ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಸಲ್ಲಿಸುವ ಮೂಲಕ ಪ್ರಮಾಣಿತ ಅರ್ಹತಾ ಮಾನದಂಡಗಳನ್ನು ನೀಡಬೇಕಾಗುತ್ತದೆ. ಪ್ಯಾನ್ 2.0 ಅನ್ನು ಎಲ್ಲಾ ತೆರಿಗೆದಾರರು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದು.

ಹಳೇ ಪಾನ್‌ ಕಾರ್ಡ್‌ ಅಪ್ಡೇಟ್‌ ಮಾಡುವುದು ಹೇಗೆ?
www.pan.utiitsl.com/PAN_ONLINE/homeaddresschange ಅಥವಾ www.onlineservices.nsdl.com/paam/endUserAddressUpdate.html ವೆಬ್‌ಸೈಟ್‌ಗೆ ಭೇಟಿ ನೀಡಿ.
– ಹೊಸ ಪಾನ್‌ ಕಾರ್ಡ್/‌ ಅಪ್ಡೇಟ್‌ ಮಾಡಲು ಲಿಂಕ್‌ ಕ್ಲಿಕ್‌ ಮಾಡಿ.
-ನಿಮ್ಮ ವಿಳಾಸ, ಇತರ ವಿವರಗಳನ್ನು ನಮೂದಿಸಿ.
-ಪರಿಶೀಲನೆ ಉದ್ದೇಶಕ್ಕಾಗಿ ದಾಖಲೆಗಳನ್ನು ಕಳುಹಿಸಿ.
-NSDL ದಾಖಲೆಗಳನ್ನು ಪರಿಶೀಲಿಸಿ ಎಲ್ಲವೂ ಸರಿಯಿದ್ದರೇ ಎರಡು ವಾರಗಳಲ್ಲಿ ಹೊಸ/ಅಪ್ಡೇಟ್ ಆಗಿರುವ PAN ಕಾರ್ಡ್ ನಿಮ್ಮ ಕೈ ಸೇರುತ್ತದೆ.

Share This Article