ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ 93 ವರ್ಷದ ಅಜ್ಜಿ ನಾಗಮ್ಮ ಅವರನ್ನು ಕಾರಾಗೃಹ ಇಲಾಖೆ ಪರೋಲ್ ಮೇಲೆ ಬಿಡುಗಡೆಗೊಳಿಸಿದೆ.
ಇತ್ತೀಚೆಗೆ ರಾಜ್ಯದ ಉಪಲೋಕಾಯುಕ್ತ ಬಿ.ವೀರಪ್ಪ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಜ್ಜಿ ನಾಗಮ್ಮ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಜ್ಜಿಗೆ ಪರೋಲ್ ನೀಡುವ ಕುರಿತು ಪರಿಶೀಲಿಸುವಂತೆ ಸಲಹೆ ನೀಡಿದ್ದರು.
ಈ ಮಧ್ಯೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರು ಅಜ್ಜಿಯ ಅನಾರೋಗ್ಯ ಮತ್ತು ಇಳಿವಯಸ್ಸಿನಲ್ಲಿ ಕಾಡುತ್ತಿರುವ ವಯೋಸಹಜ ಕಾಯಿಲೆಗಳ ಕುರಿತು ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ಈಗ ಮೂರು ತಿಂಗಳ ಅವಧಿಗಾಗಿ ಪರೋಲ್ ನೀಡಿ ಅಜ್ಜಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅಧೀಕ್ಷಕಿ ಅನಿತಾ ತಿಳಿಸಿದ್ದಾರೆ.
26 ವರ್ಷಗಳ ಹಿಂದೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಶಿಕ್ಷೆ ಪ್ರಕಟಿಸಲಾಗಿತ್ತು. ಕಳೆದೊಂದು ವರ್ಷದಿಂದ ನಾಗಮ್ಮ ಜೈಲು ವಾಸ ಅನಭವಿಸುತ್ತಿದ್ದರು. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಾನವೀಯತೆ ದೃಷ್ಟಿಯಿಂದ ಪರೋಲ್ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.