ಶಿವಮೊಗ್ಗ: ಜನವರಿ ಅಂತ್ಯದೊಳಗೆ ಶಿವಮೊಗ್ಗದ ಏರ್‌ಪೋರ್ಟ್ (Shivamogga Airport) ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಡಿಸಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯವಿಲ್ಲದಿದ್ದರೆ ವಿಮಾನ ನಿಲ್ದಾಣದ ನಿರ್ವಹಣೆ ಕಷ್ಟವಾಗುತ್ತದೆ. ಇದರಿಂದಾಗಿ ಜನವರಿ ಅಂತ್ಯದ ವೇಳೆಗೆ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಫುಡ್ ಕೋರ್ಟ್ ಸ್ಥಾಪನೆಗೆ ಒತ್ತು ನೀಡಲಾಗುತ್ತದೆ. ಎಸ್‍ಪಿ ಕಚೇರಿ, ಡಿಸಿ ಕಚೇರಿ, ಜಿಪಂ ಕಚೇರಿ ಸೇರಿದಂತೆ ಒಂದೆಡೆ ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನೂ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಆಗಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ನಗರದ ಅಲ್ಲಮಪ್ರಭು ಮೈದಾನದ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಹಣ ಒದಗಿಸಬೇಕು. ಹಾಗೆಯೇ ಅಲ್ಲಮಪ್ರಭು ಜನ್ಮಸ್ಥಳ, ಬಳ್ಳಿಗಾವಿಯ ಅಭಿವೃದ್ಧಿಗೂ ಒತ್ತು ನೀಡಬೇಕಿದೆ. ಅಲ್ಲದೇ ಚಂದ್ರಗುತ್ತಿಯ ಪ್ರಸಿದ್ಧ ರೇಣುಕಾಂಬ ದೇವಿ ದೇಗುಲದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ಮೊದಲಾದ ಸಮಸ್ಯೆಗಳ ಜೊತೆ ಸಿಎಂ ಜೊತೆ ಸಭೆ ನಡೆಸಲಾಗುವುದು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಈ ಬಗ್ಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.