ಟೆಲ್ ಅವಿವ್: 2023ರ ಅಕ್ಟೋಬರ್‌ನಿಂದ ನಡೆಯುತ್ತಿರುವ ಇಸ್ರೇಲ್-ಲೆಬನಾನ್ ಯುದ್ಧದ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ 10-1 ಮತಗಳಿಂದ ಯುಎಸ್ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ (Israel-Hezbollah ceasefire) ಒಪ್ಪಂದವನ್ನು ಅನುಮೋದಿಸಿದೆ. ಭಾರತೀಯ ಕಾಲಮಾದ ಪ್ರಕಾರ ಇಂದು ಬೆಳಗ್ಗೆ 7:30 ರಿಂದ ಕದನ ವಿರಾಮ ಜಾರಿಗೆ ಬರಲಿದೆ.
ಕದನ ವಿರಾಮ ಒಪ್ಪಂದದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden), ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತು ಲೆಬನಾನ್‌ನ ಪ್ರಧಾನಿ ನಜೀಬ್ ಮಿಕಾಟಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಕುರಿತು ಮಾತುಕತೆ ಆಡಿದ್ದಾರೆ.
ಇದು 13 ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮಂಗಳವಾರ ಪ್ರಕಟಿಸಿದೆ. ಆದ್ರೆ ಗಾಝಾದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದೆ.
ಇಸ್ರೇಲ್‌ನ (Israel) ಅನುಮೋದನೆಯ ನಂತರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ US ಅಧ್ಯಕ್ಷ ಜೋ ಬಿಡೆನ್ ಜಂಟಿ ಹೇಳಿಕೆಯನ್ನು ನೀಡಿದರು. ಈ ಸಂಘರ್ಷವು ಹಿಂಸಾಚಾರದ ಮತ್ತೊಂದು ಚಕ್ರವಾಗೋದನ್ನ ತಡೆಯಲು ನಿರ್ಧರಿಸಿದ್ದೇವೆ. ಲೆಬನಾನ್‌ನ ಸಶಸ್ತ್ರ ಪಡೆಗಳನ್ನು ನವೀಕರಿಸಲು ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಪ್ರಯತ್ನಕ್ಕಾಗಿ ಉಭಯ ರಾಷ್ಟ್ರಗಳು ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.
ಜೋ ಬೈಡನ್ ಮಾತನಾಡಿ, 60 ದಿನಗಳ ಕದನ ವಿರಾಮ ಅವಧಿಯಲ್ಲಿ ಇಸ್ರೇಲ್ ಕ್ರಮೇಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ. ಇದೇ ವೇಳೆ ಲೆಬನಾನ್ ಇಸ್ರೇಲ್ ಗಡಿಯಲ್ಲಿರುವ ತನ್ನ ಸೇನೆಯನ್ನು ನಿಯಂತ್ರಿಸುತ್ತದೆ ಎಂದು ಭಾವಿಸುತ್ತೇವೆ. ಕದನ ವಿರಾಮ ಒಪ್ಪಂದದ ಪ್ರಕಾರ ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು. ಆ ಪ್ರದೇಶದಲ್ಲಿ ಲೆಬನಾನ್ ತನ್ನ ಸೇನೆಯನ್ನು ನಿಯೋಜಿಸಬೇಕು. ಹಿಜ್ಬುಲ್ಲಾ ಮತ್ತು ಇತರ ಯಾವುದೇ ಭಯೋತ್ಪಾದಕ ಸಂಘಟನೆಗಳು ಇಸ್ರೇಲ್‌ನ ಭದ್ರತೆಗೆ ಬೆದರಿಕೆ ಹಾಕಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಲೆಬನಾನಿನ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಮಾತನಾಡಿ, ಇಸ್ರೇಲಿ ಪಡೆಗಳು ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ದಕ್ಷಿಣ ಲೆಬನಾನ್‌ನಲ್ಲಿ ಕನಿಷ್ಠ 5,000 ಸೈನಿಕರನ್ನು ನಿಯೋಜಿಸಲು ತಮ್ಮ ಸೈನ್ಯವು ಸಿದ್ಧವಾಗಿದೆ. ಜೊತೆಗೆ ಇಸ್ರೇಲ್ ದಾಳಿಗಳಿಂದ ನಾಶವಾದ ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡುವಲ್ಲಿ ಅಮೆರಿಕ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ನಂತರ ಯುದ್ಧ ಶುರುವಾಗಿತ್ತು. ಈವರೆಗೆ ಯುದ್ಧದಲ್ಲಿ ಲೆಬನಾನ್‌ನಲ್ಲಿ ಸುಮಾರು 3,800 ಜನರು ಹತ್ಯೆಗೀಡಾಗಿದ್ದಾರೆ, ಸುಮಾರು 16,000 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಎರಡೂ ರಾಷ್ಟ್ರಗಳಿಂದ 43 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.