2025ರ ಐಪಿಎಲ್ ಭಾಗವಾಗಿ ನಡೆದ ಮಗಾ ಹರಾಜಿನಲ್ಲಿ (IPL Mega Auction) ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಕೆ.ಎಲ್ ರಾಹುಲ್ (KL Rahul) 14 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಆದ್ರೆ ರಾಹುಲ್ ಅವರನ್ನು ಹೊರದಬ್ಬಿದ ಲಕ್ನೋ (LSG) 27 ಕೋಟಿ ರೂ. ದಾಖಲೆ ಬೆಲೆ ರಿಷಬ್ ಪಂತ್ (Rishabh Pant) ಅವರನ್ನು ಆರ್‌ಟಿಎಂ ಕಾರ್ಡ್ ಅಡಿ ಖರೀದಿಸಿದೆ.
2025ರ ಮೆಗಾ ಹರಾಜಿಗೆ ಪ್ರಕ್ರಿಯೆ ಶುರುವಾದಾಗಿನಿಂದಲೂ ರಾಹುಲ್, ಆರ್‌ಸಿಬಿ ತಂಡದ ಪಾಲಾಗುತ್ತಾರೆ ಎಂಬ ಹೈಪ್ ಕ್ರಿಯೇಟ್ ಆಗಿತ್ತು. ಇದರಿಂದ ಅಭಿಮಾನಿಗಳು ಹರ್ಷಗೊಂಡಿದ್ದರು. ಆದ್ರೆ ಹರಾಜಿನಲ್ಲಿ 8.75 ಕೋಟಿ ರೂ.ಗಳಿಗೆ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಖರೀದಿಸಿದ ಆರ್‌ಸಿಬಿ, ರಾಹುಲ್ ಅವರಿಗಾಗಿ ಬಿಡ್ ಮಾಡಲು ಹಿಂದೇಟು ಹಾಕಿತು.
ಆರ್‌ಸಿಬಿಯಿಂದಲೇ ವೃತ್ತಿ ಆರಂಭಿಸಿದ್ದ ಕನ್ನಡಿಗ:
2013ರಿಂದ ಐಪಿಎಲ್ ವೃತ್ತಿ ಬದುಕು ಆರಂಭಿಸಿದ ಕೆ.ಎಲ್ ರಾಹುಲ್ ಮೊದಲು ಸೇರಿದ್ದು ಆರ್‌ಸಿಬಿ ತಂಡವನ್ನೇ. 2013ರಲ್ಲಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ರಾಹುಲ್ 2014 ಮತ್ತು 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು. ಪುನಃ 2016ರಲ್ಲಿ ಆರ್‌ಸಿಬಿ ತಂಡವನ್ನೇ ಸೇರಿಕೊಂಡಿದ್ದರು. 2017ರಲ್ಲಿ ಆರ್‌ಸಿಬಿಯಲ್ಲೇ ಆಡುವ ಅವಕಾಶವಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು.
ಬಳಿಕ 2018 ರಿಂದ 2021ರ ವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಕೆ.ಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡರು. ಆಗಷ್ಟೇ ಪದಾರ್ಪಣೆ ಮಾಡಿದ್ದ ಲಕ್ನೋ ತಂಡವನ್ನು ತನ್ನ ನಾಯಕತ್ವದಲ್ಲಿ ಸತತ 2 ಬಾರಿ ಪ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು.
ಈ ವರೆಗೆ ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಕೆ.ಎಲ್ ರಾಹುಲ್ 134.61 ಸ್ಟ್ರೈಕ್ ರೇಟ್‌ನಲ್ಲಿ 4,683 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 37 ಅರ್ಧಶತಕ ಸೇರಿವೆ.
ಇಂದು ಬಿಡ್ ಆದ ಪ್ರಮುಖರು:
* ಹರ್ಷ್‌ದೀಪ್ ಸಿಂಗ್ – 18 ಕೋಟಿ ರೂ. – ಪಂಜಾಬ್ ಕಿಂಗ್ಸ್
* ಕಾಗಿಸೋ ರಬಾಡ – 10.75 ಕೋಟಿ ರೂ. – ಗುಜರಾತ್ ಟೈಟಾನ್ಸ್
* ಜೋಸ್ ಬಟ್ಲರ್ – 15.75 ಕೋಟಿ ರೂ. – ಗುಜರಾತ್ ಟೈಟಾನ್ಸ್
* ಮಿಚೆಲ್ ಸ್ಟಾರ್ಕ್ – 11 ಕೋಟಿ ರೂ. – ಡೆಲ್ಲಿ ಕ್ಯಾಪಿಟಲ್ಸ್
* ಡೇವಿಡ್ ಮಿಲ್ಲರ್ – 7.50 ಕೋಟಿ ರೂ. – ಲಕ್ನೋ ಸೂಪರ್ ಜೈಂಟ್ಸ್
* ಮೊಹಮ್ಮದ್ ಸಿರಾಜ್ – 12.25 ಕೋಟಿ ರೂ. – ಗುಜರಾಜ್ ಟೈಟಾನ್ಸ್
* ಯಜುವೇಂದ್ರ ಚಾಹಲ್ – 18 ಕೋಟಿ ರೂ. – ಪಂಜಾಬ್ ಕಿಂಗ್ಸ್
* ಲಿಯಾಮ್ ಲಿವಿಂಗ್‌ಸ್ಟೋನ್ – 8.75 ಕೋಟಿ ರೂ. – ರಾಯಲ್ ಚಾಲೆಂಜರ್ಸ್ ಬೆಂಗಳೂರು