– ಸರ್ಕಾರದ ಯಾವ್ದೇ ಕ್ರಮಗಳೂ ಮಾಲಿನ್ಯ ಕಡಿಮೆ ಮಾಡಲಾಗುತ್ತಿಲ್ಲ
– ಇನ್ನೂ ಮೂರು ತಿಂಗಳು ಮದುವೆ ಆಗುವಂತಿಲ್ಲ
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕ್ ಈಗ ವಾಯು ಮಾಲಿನ್ಯ (Pakistan Air Pollution) ಕಂಟಕಕ್ಕೆ ತುತ್ತಾಗಿದೆ. ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಮಾರ್ಪಟ್ಟಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ 1,600ಕ್ಕೆ ತಲುಪಿದೆ. ಎಲ್ಲೆಂದರಲ್ಲಿ ವಿಷಪೂರಿತ ಹೊಗೆಯಿಂದ ಜನರು ಉಸಿರಾಡುವುದಕ್ಕೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವಿಸ್ ಮಾನಿಟರ್ IQAir ಪ್ರಕಾರ, ಶುಕ್ರವಾರ ಬೆಳಿಗ್ಗೆ ಲಾಹೋರ್ (Lahore) ವಾಯು ಗುಣಮಟ್ಟ ಸೂಚ್ಯಂಕ 1,587 ನಷ್ಟಿತ್ತು.
ಅಪಾಯಮಟ್ಟ ಮೀರಿದ ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ, ಅಸ್ತಮಾ ರೋಗಗಳಿಗೆ ಜನ ತುತ್ತಾಗುತ್ತಿದ್ದು, ಈವರೆಗೆ 15,000ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಾಲದಲ್ಲಿ ಹಸಿರು ಉದ್ಯಾನಗಳಿಗೆ ಹೆಸರುವಾಸಿಯಾಗಿದ್ದ ಲಾಹೋರ್ ಈಗ ವಿಶ್ವದ ಕಲುಷಿತ ನಗರ (Worldʼs Most Polluted City) ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ವಾಹನಗಳ ಹೊರಸೂಸುವಿಕೆ, ಕಟ್ಟಡ ನಿರ್ಮಾಣಗಳಿಂದ ಬರುವ ಧೂಳು ಹಾಗೂ ಕೈಗಾರಿಕಾ ಮಾಲಿನ್ಯ ಇದಕ್ಕೆ ಕಾರಣ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಯುಮಾಲಿನ್ಯ ಕಂಟಕ – ಜನರ ಓಡಾಟಕ್ಕೆ ನಿಷೇಧ, ಅಂಗಡಿ-ಮಾರ್ಕೆಟ್ ತೆರೆಯಲು ಮಿತಿ
ಆರೋಗ್ಯ ತಜ್ಞರ ಎಚ್ಚರಿಕೆ ಏನು?
ವಾಯು ಗುಣಮಟ್ಟ ಅಪಾಯಮಟ್ಟ ಮೀರಿದ ಹಿನ್ನೆಲೆ ಪಾಕ್ ಸರ್ಕಾರವು ಈ ವಾರದ ಅಂತ್ಯದವರೆಗೆ ಶಾಲೆಗಳು, ಉದ್ಯಾನವನ ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚಲು ಸ್ಥಳೀಯ ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಜೊತೆಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು, ಕಚೇರಿ ಕೆಲಸದ ಸಮಯವನ್ನು ಕಡಿತಗೊಳಿಸಿದೆ. ಮೂರು ತಿಂಗಳು ಮದುವೆ ಕಾರ್ಯಕ್ರಮಗಳಿಗೆ ನಿಷೇಧ ಹೇರಿದೆ. ಆದಾಗ್ಯೂ ಸರ್ಕಾರದ ಯಾವುದೇ ಕ್ರಮಗಳೂ ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗುತ್ತಿಲ್ಲ. ಹಾಗಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್ ಪ್ರತಿ ಹರಿದು ಹಾಕಿದ ಸಂಸದೆ
ಸರ್ಕಾರ ಮಾಲಿನ್ಯದ ಮೂಲಗಳನ್ನು ಗುರುತಿಸಿ ನಿಯಂತ್ರಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಜೊತೆಗೆ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಏರ್ ಪ್ಯೂರಿಫೈಯರ್‌ಗಳನ್ನು ಬಳಸುವಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೆಚ್ಚಿದ ರೋಗಿಗಳ ಸಂಖ್ಯೆ:
ವರದಿಗಳ ಪ್ರಕಾರ, ಲಾಹೋರ್‌ನ ಆಸ್ಪತ್ರೆಗಳು ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಂದ ತುಂಬಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮೇಯೊ ಆಸ್ಪತ್ರೆಯಲ್ಲಿ 4,000ಕ್ಕೂ ಹೆಚ್ಚು ರೋಗಿಗಳು, ಜಿನ್ನಾ ಆಸ್ಪತ್ರೆಯಲ್ಲಿ 3,500 ರೋಗಿಗಳು, ಗಂಗಾರಾಮ್ ಆಸ್ಪತ್ರೆಯಲ್ಲಿ 3,000 ರೋಗಿಗಳು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2,000ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದಾರೆ. ಅಸ್ತಮಾ ಮತ್ತು ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳು ಮತ್ತು ರೋಗಿಗಳು ಮಾಲಿನ್ಯ ಪ್ರದೇಶದಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಪ್ರಾಣಾಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ವೈದ್ಯಕೀಯ ತಜ್ಞ ಅಶ್ರಫ್ ಜಿಯಾ ಎಚ್ಚರಿಸಿದ್ದಾರೆ.
ನವೆಂಬರ್ 10 ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು 1,900 ಕ್ಕಿಂತ ಹೆಚ್ಚು ದಾಖಲಾಗಿತ್ತು. ಬಳಿಕ ಕೊಂಚ ಇಳಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ