ಚುನಾವಣಾಧಿಕಾರಿಗೆ ಕಪಾಳಮೋಕ್ಷ – ಶರಣಾಗುವುದಿಲ್ಲ ಎನ್ನುತ್ತಿದ್ದಾಗಲೇ ಅಭ್ಯರ್ಥಿ ಅರೆಸ್ಟ್‌!

Public TV
1 Min Read
rajasthan official

ಜೈಪುರ್‌: ರಾಜಸ್ಥಾನದ (Rajasthan) ಡಿಯೋಲಿ-ಉನಿಯಾರಾ ಅಸೆಂಬ್ಲಿಯ ಉಪಚುನಾವಣೆಯ (By Poll) ವೇಳೆ ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ (Naresh Meena) ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ.

ನರೇಶ್ ಮೀನಾ ಬಂಧನಕ್ಕೂ ಕೆಲವೇ ನಿಮಿಷಗಳ ಮೊದಲು ʻನಾನು ಪೊಲೀಸರಿಗೆ ಶರಣಾಗುವುದಿಲ್ಲʼ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು.

ಬುಧವಾರ ಸಂರವತ ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದರು.

ಬುಧವಾರ ರಾತ್ರಿ ಅವರ ಬಂಧನಕ್ಕೆ ತೆರಳಿದ್ದಾಗ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ಕೆಲವೆಡೆ ಬೆಂಕಿ ಹಚ್ಚಲಾಗಿತ್ತು. ಗಲಭೆಯಲ್ಲಿ ಸುಮಾರು 8 ಕಾರುಗಳು ಮತ್ತು 24 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ 60 ಜನರನ್ನು ಬಂಧಿಸಲಾಗಿದೆ. ಇಂದು (ಗುರುವಾರ) ಅವರ ಬಂಧನಕ್ಕೆ ತೆರಳುವಾಗ ಬೆಂಬಲಿಗರ ವಿರೋಧವನ್ನು ಎದುರಿಸಲು ಸೂಕ್ತ ಕ್ರಮಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಷದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮೀನಾ ಅವರನ್ನು ಕಳೆದ ವಾರ ಕಾಂಗ್ರೆಸ್‌ ಅಮಾನತುಗೊಳಿಸಿತ್ತು.

Share This Article