ಲಕ್ನೋ: ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಹೋದ 7 ವರ್ಷದ ಬಾಲಕನಿಗೆ ವೈದ್ಯರು ಬಲಗಣ್ಣಿನ ಶಸ್ತ್ರಚಿಕಿತ್ಸೆ (Eye Surgery) ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ (Hospital) ನಡೆದಿದೆ.
ನ.12 ರಂದು ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಾಲಕನ ಎಡಗಣ್ಣಿನಿಂದ ಆಗಾಗ ನೀರು ಬರುತ್ತಿತ್ತು. ಇದಕ್ಕಾಗಿ ಬಾಲಕನ ತಂದೆ ನಿತಿನ್ ಭಾಟಿ ಆತನನ್ನು ಆಸ್ಪತ್ರೆಗೆ ತೋರಿಸಿದ್ದರು. ವೈದ್ಯರು ತಪಾಸಣೆ ನಡೆಸಿದ ನಂತರ, ಬಾಲಕನ ಕಣ್ಣಿನಲ್ಲಿ ಪ್ಲಾಸ್ಟಿಕ್ ತರಹದ ವಸ್ತುವಿದೆ. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದ್ದರು.
ಆಸ್ಪತ್ರೆಗೆ 45,000 ರೂ. ಹಣ ಪಾವತಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಬಳಿಕ ಬಾಲಕನನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಆತನ ತಾಯಿ ಬಲಗಣ್ಣಿನ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಗಮನಿಸಿದ್ದಾರೆ. ಮತ್ತೆ ವೈದ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಬಾಲಕನ ತಂದೆ, ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಕೀಯ ಅಧಿಕಾರಿಗೆ (CMO) ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ವೈದ್ಯರ ಪರವಾನಿಗೆಯನ್ನು ರದ್ದುಪಡಿಸಿ, ಆಸ್ಪತ್ರೆಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ತನಿಖೆ ಆರಂಭವಾಗಿದ್ದು, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು (Police) ತಿಳಿಸಿದ್ದಾರೆ.