– ಶೀಘ್ರವೇ ಆರ್‌ಟಿಪಿಎಸ್, ವೈಟಿಪಿಎಸ್‌ಗೆ ನೋಟಿಸ್
ರಾಯಚೂರು: ರಾಯಚೂರಿನಲ್ಲಿ (Raichuru) ಕೃಷ್ಣಾ ನದಿಗೆ (Krishna River) ವಿದ್ಯುತ್ ಕೇಂದ್ರಗಳು ಎಗ್ಗಿಲ್ಲದೆ ರಾಸಾಯನಿಕ ವಸ್ತುಗಳನ್ನು ಹರಿಬಿಡುತ್ತಿವೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿಯನ್ನು ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೀಗ ಅಧಿಕಾರಿಗಳು ವೈಟಿಪಿಎಸ್ ಹಾಗೂ ಆರ್‌ಟಿಪಿಎಸ್‌ಗೆ ನೋಟಿಸ್ ಕೊಡಲು ಮುಂದಾಗಿದ್ದಾರೆ.
ಜಿಲ್ಲೆಯ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಜಿಲ್ಲೆಯ ಹೆಮ್ಮೆ. ಆದರೆ ಇವುಗಳಿಂದ ಜಿಲ್ಲೆಯ ಜನರಿಗೆ ಯಾವುದೇ ಖುಷಿಯಿರಲಿಲ್ಲ. ಇದರಲ್ಲಿ ವಿದ್ಯುತ್ ಕೇಂದ್ರಗಳು ಜೀವಮಾರಕವಾಗಿರುವ ರಾಸಾಯನಿಕಯುಕ್ತ ತಳ ಬೂದಿಯನ್ನು ನೇರವಾಗಿ ಕೃಷ್ಣಾ ನದಿಗೆ ಹರಿಬಿಡುತ್ತಿದೆ. ಈ ಮೂಲಕ ಜನರ ಆರೋಗ್ಯ, ಜಾನುವಾರು, ಜಲಚರಗಳ ಜೀವದ ಜೊತೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.ಇದನ್ನೂ ಓದಿ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸಂಸದ ಬಸವರಾಜ ಬೊಮ್ಮಾಯಿ
ವಿದ್ಯುತ್ ಕೇಂದ್ರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಬಗ್ಗೆ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗಳ ತಂಡ ಪರಿಶೀಲನೆಗೆ ಮುಂದಾಗಿದೆ. ಸ್ಥಳದಲ್ಲಿ ಸಂಗ್ರಹಿಸಿರುವ ನೀರಿನ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇಷ್ಟು ದೊಡ್ಡಮಟ್ಟದ ನಿರ್ಲಕ್ಷ್ಯ ಕಂಡು ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲಾ ಪರಿಸರ ಅಧಿಕಾರಿ ಪ್ರಕಾಶ್ ಮಾತನಾಡಿ, ಥರ್ಮಲ್ ಪವರ್ ಪ್ಲ್ಯಾಂಟ್‌ಗಳು ರೆಡ್ ಕೆಟಗರಿಗೆ ಬರುವುದರಿಂದ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಪತ್ರ ಬರೆಯುತ್ತೇವೆ. ವಿದ್ಯುತ್ ಕೇಂದ್ರಗಳಿಗೆ ಕೂಡಲೇ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಸಂಗ್ರಹವಾಗುವ ದ್ರವರೂಪದ ತಳಬೂದಿಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡದೇ ವಿದ್ಯುತ್ ಕೇಂದ್ರದ ಅಧಿಕಾರಿಗಳು ನೇರವಾಗಿ ನದಿಗೆ ಬಿಡುತ್ತಿದ್ದಾರೆ. ಇದೇ ನೀರನ್ನು ಜನ, ಜಾನುವಾರು ಕುಡಿಯುವುದರಿಂದ ಸ್ಲೋ ಪಾಯಿಸನ್ ಜನರ ದೇಹ ಸೇರುತ್ತಿದೆ. ಕೇವಲ ನೋಟಿಸ್‌ಗೆ ಸೀಮಿತವಾಗದೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ದೇವೇಗೌಡರು ನನ್ನ ಸೊಕ್ಕು ಮುರಿಯುತ್ತೇನೆ ಎಂದಿದ್ದು ಸರಿಯೇ – ಜಮೀರ್ ಹೇಳಿಕೆಯನ್ನ ಖಂಡಿಸಿದ್ದಕ್ಕೆ ಸಿಎಂ ತಿರುಗೇಟು