– ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದ್ರು ಎಂದ ಸಿದ್ದರಾಮಯ್ಯ
ಬಳ್ಳಾರಿ: ಬಿಜೆಪಿ ಸರ್ಕಾರ ಇದ್ದಾಗ ಕೋವಿಡ್ ವೇಳೆ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ದೇಶದಲ್ಲೇ ಅಗತ್ಯ ವಸ್ತುಗಳು ಸಿಕ್ಕರೂ ಚೀನಾದಿಂದ ಪಿಪಿಇ ಕಿಟ್ ತರಿಸಿ ಲೂಟಿ ಹೊಡೆದರು. ಆಗ ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದರು, ಶ್ರೀರಾಮುಲು ಮಂತ್ರಿ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಾಂಬ್ ಸಿಡಿಸಿದ್ದಾರೆ.
ಮೆಟ್ರಿಕಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಬಳ್ಳಾರಿ (Bellary) ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಬಳಿಕ ಮಾತನಾಡಿ, ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ಕಾಂಗ್ರೆಸ್ ಪಕ್ಷ (Congress Party) ಯಾವತ್ತಿಗೂ ಕೂಡ ಬಡವರ ಪರ, ದೀನದಲಿತರ ಪರ, ಅಲ್ಪಸಂಖ್ಯಾತರು, ಮಹಿಳೆಯರ ಪರ ಇರುವ ಸರ್ಕಾರ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಕಾಲದಿಂದಲೂ ಬಡವರ ಪರ ಇರುವ ಸರ್ಕಾರ. ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬೀಗಿದರು. ಇದನ್ನೂ ಓದಿ: ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ
ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ಹಸಿರು ಕ್ರಾಂತಿ ಮಾಡಿದ್ರು. ಆಗ ಭಾರತ ದೇಶವನ್ನ ಆಹಾರದಲ್ಲಿ ಸ್ವಾಲಂಬಿಯನ್ನಾಗಿ ಮಾಡಿದ್ರು. ಬಿಜೆಪಿ ಅಂದ್ರೆ ಕೇವಲ ಮೇಲ್ವರ್ಗದ ಪಕ್ಷ. ಬಡವರ ಪರ, ರೈತರ ಪರವಾದ ಸರ್ಕಾರ ಬಿಜೆಪಿ ಅಲ್ಲಾ. ಬಿಜೆಪಿಯವರು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಬಡವರಿಗೋಸ್ಕರ ಏನೂ ಕೆಲಸ ಮಾಡಿಲ್ಲ. ಅಧಿಕಾರ ಕೊಟ್ರು ಏನು ಕೆಲಸ ಮಾಡಿಲ್ಲ. ಆದ್ರೆ ಕಾಂಗ್ರೆಸ್ ಅನ್ನಭಾಗ್ಯ, ಕೃಷಿ ಭಾಗ್ಯ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ, ರೈತರ ಸಾಲ ಮನ್ನಾ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿದೆ. ಯಡಿಯೂರಪ್ಪ ಕೇವಲ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಅಂತಾ ಹೇಳ್ತಾರೆ. ಇವೆರಡನ್ನ ಬಿಟ್ಟು ಉಳಿದಿದ್ದೆಲ್ಲವನ್ನ ಲೂಟಿ ಮಾಡಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ರೈತ ವಿರೋಧಿ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್ಸಿಗೆ ಶಾಪವಾಗಲಿದೆ – 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು: ವಿಜಯೇಂದ್ರ
ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಎಷ್ಟು ಲೂಟಿ ಹೊಡೆದಿದ್ದಾರೆ ಅಂದ್ರೆ, ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಆಗ ಮಂತ್ರಿ ಇದ್ದರು, ಯಡಿಯೂರಪ್ಪ ಸಿಎಂ ಆಗಿದ್ದರು. ಚೀನಾಕ್ಕೆ ಹೋಗಿ ಪಿಪಿಇ ಕಿಟ್ ತಂದ್ರು. ದೇಶದಲ್ಲಿ ವಸ್ತು ಸಿಗುತ್ತಿದ್ದರೂ ಚೀನಾದಿಂದ ತಂದು ಭ್ರಷ್ಟಾಚಾರ ಮಾಡಿದ್ರು. ಅದರಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಇವರ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದಾರೆ. ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ. ಜನಾರ್ದನ ರೆಡ್ಡಿ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಲೂಟಿ ಹೊಡೆದವರಿಗೆ ಮನ್ನಣೆ ನೀಡಬೇಡಿ ಎಂದು ಕರೆ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ 423 ಆಸ್ತಿಗೆ ವಕ್ಫ್ ನೋಟಿಸ್ – ಯಾವ ಜಿಲ್ಲೆಯಲ್ಲಿ ನೋಟಿಸ್ ಹಿಂದಕ್ಕೆ ಪಡೆಯಲಾಗಿದೆ?
ಅಂದು ಅಕ್ರಮ ಗಣಿ ಬಗ್ಗೆ ಸಂತೋಷ ಹೆಗಡೆ ವರದಿ ಹಿನ್ನಲೆ ಪಾದಯಾತ್ರೆ ಮಾಡಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಸಂತೋಷ ಹೆಗಡೆ ವರದಿ ನೀಡಿದ್ರು. ಈ ವರದಿಯ ಸದನದಲ್ಲಿ ಪ್ರಸ್ತಾಪಿಸಿದ ಹಿನ್ನಲೆ ನನ್ನ ಮೇಲೆ ಹೊಡೆಯಲು ಬಂದ್ರು, ಅಗ ಪಾದಯಾತ್ರೆ ಮಾಡಿದೆವು. ಆಗ ಬಳ್ಳಾರಿಯಿಂದ ಹೊರಗೆ ಹೋದವರು ಈಗ ಬಳ್ಳಾರಿಗೆ ಬಂದಿದ್ದಾರೆ. ಜನಾರ್ದನ ರೆಡ್ಡಿ ಶೋಷಣೆ ಜನರಿಗೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಯಾವ ಯೋಗ್ಯತೆಯೂ ಅವರಿಗೆ ಇಲ್ಲ. ಜನಾರ್ದನ ರೆಡ್ಡಿ ಒಮ್ಮೆ ಮಂತ್ರಿಯಾಗಿ ಇಡೀ ರಾಜ್ಯ ಲೂಟಿ ಹೊಡೆದ್ರು. ಈಗ ನನ್ನ ಮೇಲೆಯೇ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರನನ್ನು ಬಳಸಿಕೊಂಡು ಕೇಸ್ ಹಾಕಿಸಿದ್ದಾರೆ ಎಂದು ಗುಡುಗಿದರು.