ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ (Kupwara) ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Indian Army) ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆದ ಸ್ಥಳದಿಂದ ಎಕೆ 47 ರೈಫಲ್, ಎರಡು ಹ್ಯಾಂಡ್ ಗ್ರೆನೇಡ್, ನಾಲ್ಕು ಮ್ಯಾಗಜೀನ್‌ಗಳು, ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಲಾಬ್ ಪ್ರದೇಶದಲ್ಲಿ ಮಂಗಳವಾರ ಕಾರ್ಯಾಚರಣೆ ಆರಂಭವಾಗಿತ್ತು. ಬುಧವಾರ ಸಹ ಈ ಕಾರ್ಯಾಚರಣೆ ಮುಂದುವರೆದಿತ್ತು. ಓರ್ವ ಉಗ್ರನ ಹತ್ಯೆಯ ನಂತರ ಈ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬಂಡಿಪೋರಾ ಜಿಲ್ಲೆಯ ಕೆತ್ಸುನ್ ಅರಣ್ಯದಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆಗೈಯ್ಯಲಾಗಿತ್ತು. ಆ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಕಾಶ್ಮೀರದಲ್ಲಿ ನೂತನ ಸರ್ಕಾರ ರಚನೆಯಾದಗಿನಿಂದ ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ. ನವೆಂಬರ್ 2 ರಂದು, ಹಳೆಯ ಶ್ರೀನಗರ ನಗರದ ಖನ್ಯಾರ್ ಪ್ರದೇಶದಲ್ಲಿ ನಡದ ಕಾರ್ಯಾಚರಣೆಯಲ್ಲಿ ಎಲ್ಇಟಿಯ ಕಮಾಂಡರ್‌ನನ್ನು ಹತ್ಯೆಗೈಯ್ಯಲಾಗಿತ್ತು. ಈ ಕಾರ್ಯಾಚರಣೆ ವೇಳೆ ಇಬ್ಬರು ಸ್ಥಳೀಯ ಪೊಲೀಸರು ಮತ್ತು ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.
ಕಳೆದ ತಿಂಗಳು ಗಂದರ್‌ಬಾಲ್ ಜಿಲ್ಲೆಯ ಗಗಂಗೀರ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರನ್ನು ಸಾವನ್ನಪ್ಪಿದ್ದರು.