MUDA Case; ಸತತ 2 ಗಂಟೆ ವಿಚಾರಣೆ; ಸಿಎಂ ಸಿದ್ದರಾಮಯ್ಯಗೆ 40 ಕ್ಕೂ ಹೆಚ್ಚು ಪ್ರಶ್ನೆಗಳು

Public TV
1 Min Read
siddaramaiah muda mysuru

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನವನ್ನು ಅಕ್ರಮವಾಗಿ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಸತತ 2 ಗಂಟೆಗಳ ಕಾಲ ಸಿಎಂ ವಿಚಾರಣೆ ನಡೆಸಲಾಗಿದ್ದು, 40 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು.

ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸಿದ್ದು ಇದೇ ಮೊದಲು.

ವಿಚಾರಣೆ ಬಳಿಕ, ಮತ್ತೆ ವಿಚಾರಣೆಗೆ ಕರೆದರೆ ಬರಬೇಕು ಎಂದು ಅಧಿಕಾರಿಗಳು ಸಹಿ ಪಡೆದುಕೊಂಡರು. ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ ಆರಾಮಾಗಿ ಹೊರಬಂದರು. ನಂತರ ತಮ್ಮ ಕಾರು ಹತ್ತಿ ವಾಪಸ್ ಆದರು.

ವಿಚಾರಣೆ ವೇಳೆ ಸಿಎಂ ಬಹಳ ತಾಳ್ಮೆಯಿಂದ ಇದ್ದರು. ಯಾವ ಪ್ರಶ್ನೆಗಳಿಗೂ ತಾಳ್ಮೆ ಕಳೆದುಕೊಳ್ಳದೇ ಉತ್ತರ ಕೊಟ್ಟರು. ‘ನಾನು ಒಬ್ಬ ಕಾಮನ್‌ಮ್ಯಾನ್ ಅಂದುಕೊಂಡು ವಿಚಾರಣೆ ಮಾಡಿ. ಯಾವುದೇ ಒತ್ತಡಕ್ಕೂ ಒಳಗಾಗಬೇಡಿ’ ಎಂದು ಎರಡೆರಡು ಬಾರಿ ಅಧಿಕಾರಿಗಳಿಗೆ ಸಿಎಂ ತಿಳಿಸಿದರು. ತಾವು ನೀಡಿದ ಎಲ್ಲಾ ಉತ್ತರವನ್ನು ಲಿಖಿತ ರೂಪದಲ್ಲಿ ಇದ್ದದ್ದನ್ನು ಓದಿಕೊಂಡು ಕೊನೆಗೆ ಸಹಿ ಹಾಕಿದರು. ಅರ್ಧ ಗಂಟೆ ವಿಚಾರಣೆ ಮುಗಿದಾಗ ಬ್ರೇಕ್ ಬೇಕಾ ಎಂದು ವಿಚಾರಣಾಧಿಕಾರಿಗಳು ಕೇಳಿದರು. ‘ಅದರ ಅಗತ್ಯವಿಲ್ಲ, ಮುಂದುವರಿಸಿ’ ಎಂದು ಸಿಎಂ ತಿಳಿಸಿದರು.

ನೀವು ಮತ್ತೆ ಕರೆದರೆ ವಿಚಾರಣೆಗೆ ಬರ್ತೀನಿ. ಅಗತ್ಯವಿದ್ದರೆ ಕರೆಯಿರಿ ಎಂದು ವಿಚಾರಣೆ ಅಂತ್ಯದ ಬಳಿಕ ಸಿಎಂ ತಿಳಿಸಿದರು. ನಂತರ ಮೈಸೂರಿನಿಂದ ಚನ್ನಪಟ್ಟಣದತ್ತ ಪ್ರಯಾಣ ಬೆಳೆಸಿದರು.

Share This Article