ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ

Public TV
3 Min Read
Kannada Rajyostava in Kanteerava Stadium 2

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ. ಇನ್ನೂ ಮುಂದೆ ಯಾರಾದರೂ ನಿಂದಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದರು.

ಬೆಂಗಳೂರಿನ (Bengaluru) ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರೆಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಭಾಗಿಯಾಗಿದ್ದರು.ಇದನ್ನೂ ಓದಿ: ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಿ – ಪ್ರಧಾನಿ ಮೋದಿಗೆ ಯತ್ನಾಳ್ ಪತ್ರ

Kannada Rajyostava in Kanteerava Stadium 1

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲರಲ್ಲಿಯೂ ಕನ್ನಡ ಅಭಿಮಾನ ಇರಲಿ, ದುರಭಿಮಾನ ಬೇಡ. ಅಭಿಮಾನವಿದ್ದರೆ ಮಾತ್ರ ಕನ್ನಡ ಬೆಳೆಯುತ್ತದೆ. ಕನ್ನಡ ಬಾರದವರ ಜೊತೆಯಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿ. ಕನ್ನಡ ಬಾರದವರಿಗೆ ಕನ್ನಡ ಕಲಿಸಬೇಕು, ಆಗ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲರೂ ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ. ನಾವು ಕನ್ನಡಿಗರಾಗಿರುತ್ತೇವೆ. ಬೇರೆಯವರನ್ನೂ ಕನ್ನಡಿಗರಾಗಿ ಮಾಡುತ್ತೇವೆ. ವ್ಯವಹಾರದಲ್ಲೂ ಕನ್ನಡ ಬಳಸುತ್ತೇವೆ ಎಂದು ಶಪಥ ಮಾಡೋಣ ಎಂದು ತಿಳಿಸಿದರು.

ರಾಜ್ಯದ ಎಲ್ಲ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಕೊಡುತ್ತಿದ್ದೇವೆ. ಈಗ ಮಕ್ಕಳಿಗೆ ಹಾಲಿನ ಜೊತೆಗೆ ರಾಗಿ ಮಾಲ್ಟ್ ಕೊಡುತ್ತಿದ್ದೇವೆ. ಅಸಮಾನತೆ, ಅಪೌಷ್ಟಿಕತೆಯನ್ನು ಹೊಡೆದೊಡಿಸಲು ಹಾಗೂ ಗುಣಮಟ್ಟದ ಶಿಕ್ಷಣ ಕೊಡುವ ಸಲುವಾಗಿ ಈ ಯೋಜನೆಗಳನ್ನು ಮಾಡುತ್ತಿದ್ದೇವೆ. ಕನ್ನಡದ ಅಭಿಮಾನವಿರಲಿ. ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರು ಇರಲಿ ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡಿಗರೇ. ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಬೇರೆ ಭಾಷೆ ಕಲಿಯಿರಿ, ಆದರೆ ಕನ್ನಡ ಮರೆಯಬೇಡಿ ಎಂದು ಹೇಳಿದರು.

CM Siddaramaiah

ರಾಜ್ಯಗಳ ಏಕೀಕರಣ ಆಗಿ 68 ವರ್ಷಗಳು ತುಂಬಿದ್ದು 69ಕ್ಕೆ ಕಾಲಿಟ್ಟಿದ್ದೀವಿ. 1953ರಲ್ಲಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಸಮಿತಿ ರಚಿಸಲಾಯಿತು. ಇವರು ಕೊಟ್ಟ ವರದಿ ಆಧಾರದಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಯಿತು. ಆ ದಿನವನ್ನು ನಾವೆಲ್ಲರೂ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವಾಗಿ ಆಚರಿಸುತ್ತಿದ್ದೇವೆ. 1973ರವರೆಗೆ ಕರ್ನಾಟಕ ರಾಜ್ಯ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು 1973 ನವೆಂಬರ್ 1 ರಂದು ಹೆಸರು ಇಡಲಾಯಿತು. ನಾಮಕರಣ ಆಗಿ 51 ವರ್ಷ ತುಂಬುತ್ತಿದೆ. 50 ವರ್ಷವಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ ಅವರು 50ನೇ ವರ್ಷದ ಆಚರಣೆ ಮಾಡಲಿಲ್ಲ. ನಾವು ಬಂದ ಮೇಲೆ ಇಡೀ ವರ್ಷ ಸಂಭ್ರಮದಿಂದ ಆಚರಣೆ ಮಾಡಿದೆವು ಎಂದರು.

Kannada Rajyostava in Kanteerava Stadium

ರಾಜ್ಯಕ್ಕೆ ತೆರಿಗೆ ಅನ್ಯಾಯದ ವಿಚಾರ:
ಕರ್ನಾಟಕಕ್ಕೆ ಇವತ್ತು ದೊಡ್ಡ ಅನ್ಯಾಯ ಆಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ನಾವು 4 ಲಕ್ಷ ಕೋಟಿ ರೂ.ಗೂ ಹೆಚ್ಚು ತೆರಿಗೆ ಕಟ್ಟಿದ್ದರೂ ವಾಪಸ್ ಪಡೆಯುತ್ತಿರುವುದು 50-60 ಸಾವಿರ ರೂ. ಕೋಟಿ ಮಾತ್ರ. 1 ರೂ.ಯಲ್ಲಿ 14-15 ಪೈಸೆ ಮಾತ್ರ ನಮಗೆ ವಾಪಸ್ ಕೊಡುತ್ತಿದ್ದಾರೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ. ಹಸು ಹಾಲು ಕೊಡುತ್ತದೆ ಎಂದು ಕರುವಿಗೆ ಹಾಲು ಕೊಡದಿದ್ದರೆ ಆ ಕರು ದುರ್ಬಲ ಆಗುತ್ತದೆ. ನಾವು ಕೊಡುವ ತೆರಿಗೆ, ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡಿ ಎಂದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. ಇದನ್ನು ನಾವೆಲ್ಲ ಕನ್ನಡಿಗರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕು ನಾವು ಕೇಳಬೇಕು. ಎಲ್ಲ ಸಂಸದರೂ ಲೋಕಸಭೆಯಲ್ಲಿ ಪ್ರತಿಭಟಿಸಿ, ತಮ್ಮ ದನಿಯನ್ನು ಲೋಕಸಭೆಯಲ್ಲಿ ಎತ್ತಬೇಕು ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಸಂಸದರಿಗೆ ನಮ್ಮ ಅನ್ಯಾಯ ಪ್ರಸ್ತಾಪಿಸಿ, ಸರಿಪಡಿಸುವ ಶಕ್ತಿ ಬರಲಿ. ಹಿಂದೆಯಿದ್ದ ಬಿಜೆಪಿ ನಮಗೆ ಬರಬೇಕಾದ ತೆರಿಗೆ ಪಾಲು ಕೇಳುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್‌ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ

 

Share This Article