ಹಾವೇರಿ: ರಾಜ್ಯಾದ್ಯಂತ ಈಗ ವಕ್ಫ್ ಆಸ್ತಿಗಳ (Waqf Property) ಒತ್ತುವರಿ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕು ಕಡಕೋಳ ಗ್ರಾಮದಲ್ಲಿ ವಕ್ಫ್ ಆಸ್ತಿ ಗಲಾಟೆ ನಡೆದಿದ್ದು, 28ಕ್ಕೂ ಅಧಿಕ ಮಂದಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರಾಮದಲ್ಲಿ ಬುಧವಾರ ತಡರಾತ್ರಿ ವಕ್ಫ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಮನೆಗಳ ಖಾತಾ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗುತ್ತಿದೆ ಎಂಬ ಆತಂಕದಿಂದ ಉದ್ರಿಕ್ತರು ಗಲಾಟೆ ನಡೆಸಿದ್ದರು. ಉದ್ರಿಕ್ತ ಗುಂಪು ಇನ್ನೊಂದು ಗುಂಪಿನ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ, ಹಲ್ಲೆ ನಡೆಸಿತ್ತು. ಗಲಾಟೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಸವಣೂರು ಮತ್ತು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚನ್ನಪಟ್ಟಣ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತೆ: ಪೊನ್ನಣ್ಣ
ಮುಸ್ಲಿಂ ಮುಖಂಡ ಮಹಮದ್ ರಫಿ ಎಂಬುವರ ಮನೆ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ ನಡೆದಿದೆ. ಕಲ್ಲು ತೂರಾಟ ನಡೆಸಿ ಮನೆ ಮುಂದಿರೋ ಬೈಕ್ ಒಡೆದು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಕೋಳ ಗ್ರಾಮಕ್ಕೆ ಡಿಸಿ ವಿಜಯ್ ಮಹಾಂತೇಶ್, ಎಸ್‌ಪಿ ಅಂಶು ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಹಿತಕರ ಘಟನೆಗಳಾಗದಂತೆ ಗ್ರಾಮಸ್ಥರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ ಗ್ಲೈಡರ್ – ಪ್ರವಾಸಿಗ ದುರ್ಮರಣ
ಗ್ರಾಮದಲ್ಲಿ 100ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಐಜಿಪಿ ರಮೇಶ್ ಬಾನೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28ಕ್ಕೂ ಅಧಿಕ ಜನರನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ: ಆರ್.ಅಶೋಕ್