– ಬೇಕು ಅಂತಾನೆ ಕೊಟ್ಟಿಲ್ಲ ಅಂದ್ರು ಡಿಸಿಎಂ
ಬೆಂಗಳೂರು: ಬೆಂಗಳೂರು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ರಾಜಕೀಯ ನಡೆದಿದೆ. ಬಿಜೆಪಿ ಶಾಸಕ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಡಿಸಿಎಂ ಹೊರಗಿಟ್ಟಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಚೇತ್ರಗಳಿಗೆ ತಲಾ 10 ಕೋಟಿಯಂತೆ 270 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಬೇಕಂತಲೇ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದಾರೆ.
ಅಸೆಂಬ್ಲಿಯಲ್ಲಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಶಾಸಕ ಸಿ.ಕೆ.ರಾಮಮೂರ್ತಿ ಮಾತಾಡಿದ್ದರು ಎಂಬ ಕಾರಣಕ್ಕೆ ಜಯನಗರಕ್ಕೆ ಅನುದಾನ ನೀಡಿಲ್ಲ ಎಂದು ಹೇಳಲಾಗಿದೆ. ಇದು ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.
ಇದು ಸೇಡಿನ ಕ್ರಮ. ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಈ ಸರ್ಕಾರ ಶಿಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಡಿಸಿಎಂ ಮಾತಾಡಿದ್ದು, ನಾನೇ ಬೇಕು ಅಂತಾ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.