ಪ್ರಿಸ್ಟೀನಾ: ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಕೋಳಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಗೂಡಿನಿಂದ ಹೊರಬರಲು ಕೊಸರಾಡಿ ಕೊನೆಗೆ ಕೋಳಿ ಹೊರಬಂದ ಮೇಲೆ ಅದರ ಗಾತ್ರವನ್ನು ನೋಡಿ ಜನ ದಂಗಾಗಿದ್ದಾರೆ.
ದೈತ್ಯ ಕಾಲುಗಳು ಹಾಗೂ ಸಾಮಾನ್ಯಕ್ಕಿಂತ ದೊಡ್ಡದಾದ ಪುಕ್ಕಗಳನ್ನ ಹೊಂದಿರೋ ಈ ಕೋಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಿದೆ. ಕೊಸೋವೋದ ಫಿತಿಮ್ ಸೆಜ್ಫಿಜಾಜ್ ಎಂಬವರು ಸಾಕಿರುವ ಈ ಕೋಳಿ ಹೆಸರು ಮೆರಾಕ್ಲಿ. ಮೊದಲಿಗೆ ಈ ಕೋಳಿಯ ವೀಡಿಯೋ ನೋಡಿದವರು ಯಾರೋ ಮನುಷ್ಯರೇ ಕೋಳಿಯ ವೇಷ ಧರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಆದ್ರೆ ಇದು ನಿಜಕ್ಕೂ ಕೊಳಿಯೇ. ಇದು ಬ್ರಹ್ಮ ಚಿಕನ್ ತಳಿಯ ಕೋಳಿ. ಸಾಮಾನ್ಯವಾಗಿ ಬ್ರಹ್ಮ ತಳಿಯ ಕೋಳಿಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಇವನ್ನ ಕೋಳಿಗಳ ರಾಜ ಎಂದೇ ಕರೆಯಲಾಗುತ್ತದೆ.
ಈ ತಳಿಯ ಉಗಮದ ಬಗ್ಗೆ ಹಲವು ವಾದಗಳಿವೆ. ಆದರೂ ಇವನ್ನು ಚೀನಾದ ಶಾಂಘೈನಿಂದ ಆಮದು ಮಾಡಿಕೊಳ್ಳಲಾದ ದೊಡ್ಡ ಗಾತ್ರದ ಪಕ್ಷಿಗಳನ್ನ ಬಳಸಿ ಅಮೆರಿಕದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎಂದು ಹೇಳಲಾಗಿದೆ. ಬ್ರಹ್ಮ ತಳಿಯ ಕೋಳಿಗಳ ಸರಸರಿ ತೂಕ 600 ಗ್ರಾಂನಿಂದ 3.6 ಕೆಜಿವರೆಗೆ ಇರುತ್ತದೆ. ಬ್ರಹ್ಮ ತಳಿಯ ಹುಂಜ ಬರೋಬ್ಬರಿ 8 ಕೆಜಿವರೆಗೆ ತೂಗುತ್ತವೆ.
ಈ ಕೋಳಿಯ ವೀಡಿಯೋವನ್ನ ಫೇಸ್‍ಬುಕ್ ಪೇಜ್‍ವೊಂದರಲ್ಲಿ ಹಂಚಿಕೊಳ್ಳಲಾಗಿದ್ದು, 8 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.