ಬೆಂಗಳೂರು: ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ (Ravishankar Guruji) ಅವರಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ (ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ) (Fiji Civilian Award) ನೀಡಿ ಗೌರವಿಸಲಾಯಿತು.
ಮಾನವ ಸ್ಫೂರ್ತಿ ಹಾಗೂ ಶಾಂತಿ ಮತ್ತು ಸಾಮರಸ್ಯದ ಮೂಲಕ ವಿವಿಧ ಸಮುದಾಯಗಳನ್ನು ಒಂದುಗೂಡಿಸುವ ಅವರ ಕಾರ್ಯವನ್ನು ಶ್ಲಾಘಿಸಿ ಫಿಜಿ ರವಿಶಂಕರ್ ಗುರೂಜಿ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಫಿಜಿ ರೀಪಬ್ಲಿಕ್‌ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರವಿಶಂಕರ್ ಗುರೂಜಿ ಅವರಿಗೆ ವಿವಿಧ ದೇಶಗಳ 6ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದೆ.
ರವಿಶಂಕರ್ ಗುರೂಜಿ ಅವರು ತಮ್ಮ ಆರ್ಟ್ ಆಫ್ ಲಿವಿಂಗ್ (Art Of living) ಮೂಲಕ ಕಳೆದ 43 ವರ್ಷಗಳಿಂದ ಜನ ಸಮೂಹಕ್ಕೆ ಸಂತೋಷ, ಸಾಮರಸ್ಯ ಹರಡುತ್ತಿದ್ದಾರೆ. ಇದರೊಂದಿಗೆ ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ ಜಾಗೃತಿ, ಮಹಿಳಾ ಹಾಗೂ ಯುವ ಸಬಲೀಕರಣಕ್ಕೆ ಒತ್ತು, ಒತ್ತಡ ನಿವಾರಣೆ, ಧ್ಯಾನದ ಕಾರ್ಯಮಗಳು ಹೀಗೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಡುತ್ತಿದ್ದಾರೆ. ಗುರೂಜಿ ಅವರ ಸಮಾಜದೇವಾ ಕಾರ್ಯಕ್ಕೆ ಮೆಚ್ಚಿ ಫಿಜಿ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ರವಿಶಂಕರ್ ಗುರೂಜಿ ಅವರು ಫಿಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಿಜಿಯ ಉಪಪ್ರಧಾನಿ ವಿಲಿಯಮೆ ಗಾವೋಕ, ಫಿಜಿಯ ಸಂಯುಕ್ತ ರಾಷ್ಟ್ರಗಳ ವಸತಿ ಸಂಯೋಜಕರಾದ ಡಿರ್ಕ್ ವಾಗೆನರ್ ಅವರೊಂದಿಗೆ ಸಂವಾದ ನಡೆಸಿದರು. ಈ ದ್ವೀಪ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞಾನದ ಪರಿಚಯದ ಮೂಲಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಫಿಜಿಯ ಸಮಗ್ರ ಬೆಳವಣಿಗೆಗೆ ಹೇಗೆ ಕೊಡುಗೆ ನೀಡಬಹುದು ಎನ್ನುವ ಬಗ್ಗೆ ಗಣ್ಯರೊಂದಿಗೆ ಚರ್ಚಿಸಿದರು.