– ಭರ್ಜರಿ ರೋಡ್ ಶೋ ಮೂಲಕ ಶಕ್ತಿಪ್ರದರ್ಶನ
ರಾಮನಗರ: ಚನ್ನಪಟ್ಟಣ ಉಪಚುನಾವಣಾ (Channapatna By Election) ಕಣ ರಂಗೇರಿದ್ದು, ಎನ್‌ಡಿಎ (NDA) ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ದೋಸ್ತಿ ನಾಯಕರೊಂದಿಗೆ ಚನ್ನಪಟ್ಟಣದ ಶೇರ್ವಾ ಹೋಟೆಲ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೂ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ, ಸಂಸದ ಡಾ.ಮಂಜುನಾಥ್ ಸೇರಿ ಜೆಡಿಎಸ್‌ನ ಶಾಸಕರು, ಮಾಜಿ ಸಚಿವರು ಭಾಗಿಯಾಗಿದ್ದರು. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್‌ನ ಸುಮಾರು 20 ಸಾವಿರ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ
ರೋಡ್ ಶೋ ಬಳಿಕ ತಾಲೂಕು ಕಚೇರಿಗೆ ಆಗಮಿಸಿ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ನಿಖಿಲ್‌ಗೆ ಹೆಚ್‌ಡಿಕೆ, ಆರ್.ಅಶೋಕ್, ಸದಾನಂದಗೌಡ, ಬಿ.ವೈ.ರಾಘವೇಂದ್ರ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಈ ಬಾರಿ ಚಕ್ರವ್ಯೂಹ ಬೇಧಿಸುವ ಶಕ್ತಿ ಚನ್ನಪಟ್ಟಣದ ಜನ ನೀಡುತ್ತಾರೆ. ಹಣ ಬಲ, ತೋಳ್ಬಲ ಯಾವುದೂ ನಡೆಯಲ್ಲ. ಚನ್ನಪಟ್ಟಣ ಜನ ನಮ್ಮ ಅಭಿವೃದ್ಧಿ ಕೆಲಸಗಳಿಗೆ ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ