ನವದೆಹಲಿ: ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ನಡೆಸಿದ ಹೋರಾಟದ ವಿಜಯೋತ್ಸವಕ್ಕೆ 200 ವರ್ಷ ಪೂರ್ಣಗೊಂಡ ಹಿನ್ನೆಲೆ ಸಂಸತ್ ಆವರಣದಲ್ಲಿರುವ ರಾಣಿ ಚೆನ್ನಮ್ಮ ಪ್ರತಿಮೆಗೆ ಲೋಕಸಭೆ ಸ್ಪೀಕರ್ ಓಂಬಿರ್ಲಾ (Om Birla) ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು.
ಐತಿಹಾಸಿಕ ದಿನದ ಹಿನ್ನೆಲೆ ಸಂಸತ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ದೆಹಲಿ ಕನ್ನಡಿಗರು ಭಾಗಿಯಾಗಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.ಇದನ್ನೂ ಓದಿ: ವಯನಾಡ್ ಉಪಚುನಾವಣೆ | ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ (V.Sommanna), ಈ ದೇಶದ ಸ್ವತಂತ್ರ ಪೂರ್ವ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ಸಾರಿದ ಮೊದಲ ಧೀರ ಮಹಿಳೆ ಚೆನ್ನಮ್ಮ, ಬ್ರಿಟಿಷರನ್ನು ಸೋಲಿಸಿದ ದಿನಕ್ಕೆ 200 ವರ್ಷಗಳಾಗಿದೆ. ಬ್ರಿಟಿಷರ ವಿರುದ್ಧ ಹೋರಾಟದ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿ, ಸ್ವಾತಂತ್ರ‍್ಯ ಹೋರಾಟಕ್ಕೆ ಪ್ರೇರಣೆ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಇತಿಹಾಸವನ್ನು ದೇಶಕ್ಕೆ ಸಮರ್ಪಣೆ ಮಾಡುವ ಪ್ರಯತ್ನವೂ ಮಾಡಿದೆ ಎಂದು ಹೇಳಿದರು.
ಜಯಮೃತಂಜ್ಯಯ ಸ್ವಾಮೀಜಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ಮೊದಲ ಬಾರಿಗೆ ಸಂಸತ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷಗೊಳಿಸಿದೆ. ಈ ವರ್ಷ ಮಾಡಿದರೆ ಸಾಲದು ಪ್ರತಿ ವರ್ಷವೂ ಈ ಕಾರ್ಯಕ್ರಮ ಸಂಸತ್‌ನಲ್ಲಿ ನಡೆಯಬೇಕು. ಈ ಮೂಲಕ ಉತ್ತರ ಭಾರತದ ಜನರಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೀತಿಯಲ್ಲಿ ರಾಣಿ ಚೆನ್ನಮ್ಮ ಅವರ ಶೌರ್ಯ ತಿಳಿಯಬೇಕಿದೆ ಎಂದರು.
ಪರಿಷತ್ ಸದಸ್ಯ ಅರವಿಂದ್ ಬೆಲ್ಲದ್ (Arvind Bellad) ಮಾತನಾಡಿ, ಎರಡು ನೂರು ವರ್ಷಗಳ ಹಿಂದೆ ಇದೇ ದಿನ ಠಾಕ್ರೆಯನ್ನು ಚೆನ್ನಮ್ಮ ಸೋಲಿಸಿ ಭಾರತ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಚೆನ್ನಮ್ಮನ ಗಂಡ ತೀರಿದ ಬಳಿಕ ಮಗುವನ್ನು ದತ್ತು ಪಡೆಯಲು ಸಾಧ್ಯವಿಲ್ಲ ಎಂದು ಬ್ರಿಟಿಷರು ಹೇಳಿದಾಗ ಅವರು ವಿರುದ್ಧ ಯುದ್ಧ ಸಾರಿದರು. ಇಂದು ಸಂಸತ್‌ನಲ್ಲಿ ಸನ್ಮಾನ ಮಾಡಲು ಅವಕಾಶ ನೀಡಿರುವ ಕಾರಣ ನಾನು ಸ್ಪೀಕರ್ ಓಂಬಿರ್ಲಾ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಭಾಗಿಯಾಗಿದ್ದರು.ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು