ಬೆಂಗ್ಳೂರು ಸೇರಿದಂತೆ ರಾಜ್ಯದೆಲ್ಲೆಡೆ ಭಾರೀ ಮಳೆ – ಹಲವೆಡೆ ಅವಾಂತರ

Public TV
1 Min Read
Chikkamagaluru Rain

ಬೆಂಗಳೂರು: ನಗರದಲ್ಲಿ ಬಿಟ್ಟುಬಿಡದೇ ಸುರಿದ ಮಳೆ ಜನರನ್ನು ಮತ್ತೆ ಹೈರಾಣಾಗುವಂತೆ ಮಾಡಿದೆ. ಬೆಂಗ್ಳೂರು (Bengaluru) ಮಾತ್ರವಲ್ಲದೇ ಶಿವಮೊಗ್ಗ (Shivamogga), ಚಿಕ್ಕಮಗಳೂರಲ್ಲೂ (Chikkamagaluru) ಭಾರೀ ಮಳೆಯಾಗಿದ್ದು ಜನ ಮಳೆಯಿಂದ ಪರದಾಡಿದ್ದಾರೆ.

ಕೆಂಗೇರಿಯಲ್ಲಿ ದಾಖಲೆಯ 141, ಸೂಳೆಕೆರೆಯಲ್ಲಿ 115, ಆರ್‍ಆರ್ ನಗರದಲ್ಲಿ 106 ಮಿಲಿಮೀಟರ್ ಮಳೆ ಬಿದ್ದಿದೆ. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ನೀರು ಆವರಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ. ಸಾಯಿ ಲೇಔಟ್ ಮತ್ತೆ ಜಲಾವೃತವಾಗಿದ್ದು, ಹಾವುಗಳು ಕೂಡ ಕಾಣಿಸಿಕೊಂಡಿವೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜನ ಬೀದಿಗೆ ಇಳಿದು ಆಕ್ರೋಶ ಹೊರಹಾಕಿದ್ದಾರೆ.

RAIN

ಕುಮಾರಸ್ವಾಮಿ ಲೇಔಟ್ ಕೂಡ ಜಲಮಯವಾಗಿ ಜನ ಪರದಾಡಿದ್ದಾರೆ. ಕೆಂಗೇರಿ, ಆರ್‍ಆರ್ ನಗರ, ಉತ್ತರಹಳ್ಳಿ ಭಾಗಗಳಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿವೆ. ಅಪಾರ್ಟ್‍ಮೆಂಟ್‍ಗಳ ಬೇಸ್‍ಮೆಂಟ್‍ಗಳಲ್ಲಿ ನೀರು ತುಂಬಿ ಹತ್ತಾರು ವಾಹನಗಳು ಮುಳುಗಡೆಯಾಗಿವೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಹೆಚ್ಚಿನ ಮಳೆಯಾಗಿದೆ. ವಿಶೇಷವಾಗಿ ದಕ್ಷಿಣ ಒಳನಾಡು-ಮಲೆನಾಡು-ಕರಾವಳಿ ಭಾಗಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಉಡುಪಿ-ಶಿವಮೊಗ್ಗ-ಚಿಕ್ಕಮಗಳೂರು-ರಾಮನಗರ ಜಿಲ್ಲೆಗಳಲ್ಲಿ 100 ಮಿಲಿಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಮಳೆಯ ಪರಿಣಾಮ ಮುಳ್ಳಯ್ಯನಗಿರಿ ತಪ್ಪಲು ಜಲಾವೃತಗೊಂಡಿದೆ. ರಸ್ತೆಗಳಲ್ಲಿ ಎರಡಡಿ ನೀರು ಹರಿದಿವೆ.

ರಣಮಳೆಗೆ ಶಿವಮೊಗ್ಗ ತತ್ತರಿಸಿದೆ. ಹಲವು ಬಡಾವಣೆ, ರಸ್ತೆಗಳು ಜಲಮಯವಾಗಿವೆ. ನಗರದ ಕೋಳಿಫಾರಂ ಒಂದಕ್ಕೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಮರಿಗಳು ಸಾವಿಗೀಡಾಗಿವೆ. ಭದ್ರಾವತಿ ತಾಲೂಕಲ್ಲಿ ವಿಪರೀತ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಹುಬ್ಬಳ್ಳಿ-ಧಾರವಾಡ ಹೈವೇ ಕುಸಿದು ವಾಹನ ಸವಾರರು ಪರದಾಡಿದ್ದಾರೆ.

Share This Article