ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ

Public TV
1 Min Read
CRPF School

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (New Delhi) ರೋಹಿಣಿಯಲ್ಲಿರುವ ಸಿಆರ್‌ಪಿಎಫ್‌ ಶಾಲೆಯಲ್ಲಿ (CRPF School) ಭಾರಿ ಸ್ಫೋಟ ಸಂಭವಿಸಿದೆ.

ಸ್ಫೋಟದಿಂದ ಶಾಲೆಯ ಗೋಡೆಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಫೊರೆನ್ಸಿಕ್‌ ತಂಡಗಳು ಮತ್ತು ದೆಹಲಿ ಪೊಲೀಸ್‌ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ ವೀಡಿಯೋದಲ್ಲಿ, ಸ್ಫೋಟದ ಸ್ಥಳದ ಸಮೀಪದಿಂದ ಹೊಗೆಯ ಮೋಡ ಕಂಡುಬಂದಿದೆ. ‘ನಾನು ಮನೆಯಲ್ಲಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ಮೋಡದಂತೆ ಹೊಗೆ ಆವರಿಸಿತು. ಏನಾಯಿತು ಎಂದು ನನಗೆ ಗೊತ್ತಿಲ್ಲ. ಪೊಲೀಸ್ ತಂಡ ಮತ್ತು ಅಂಬುಲೆನ್ಸ್‌ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳಗ್ಗೆ 7:47ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲು ತಜ್ಞರನ್ನು ಕರೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಗೋಯೆಲ್ ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಶಾಲೆಯ ಬಳಿ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆಗೆ ಮಾಹಿತಿ ನೀಡಲಾಗಿದ್ದು, ತಂಡವೊಂದು ಸ್ಥಳಕ್ಕೆ ಭೇಟಿ ನೀಡಬಹುದು. ಕಚ್ಚಾ ಬಾಂಬ್ ಸ್ಫೋಟಿಸಿರಬಹುದು ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

Share This Article