ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿದ ಮಳೆಯು ಹತ್ತಿ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಅತೀವೃಷ್ಠಿ ಭಾರೀ ನಷ್ಟವನ್ನುಂಟು ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.
ಕಳೆದ ವರ್ಷ ಬರಗಾಲದಿಂದ ತತ್ತರಿಸಿ ಹೋಗಿದ್ದ ರಾಯಚೂರಿನ (Raichuru) ರೈತರು, ಈ ಬಾರಿ ಉತ್ತಮ ಮಳೆಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಉತ್ತಮ ಮಳೆಯಿಂದಾಗಿ ಉತ್ಕೃಷ್ಟ ಫಸಲನ್ನು ಕಂಡಿದ್ದರು. ಅದರಲ್ಲೂ ಹತ್ತಿ ಬೆಳೆಗಾರರಂತೂ (Cotton Crop) ಬಂಪರ್ ಬೆಳೆಯ ಆಸೆಯಲ್ಲಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅತಿಯಾದ ಮಳೆ ರೈತರ ಎಲ್ಲಾ ಕನಸುಗಳನ್ನು ನುಚ್ಚುನೂರು ಮಾಡುತ್ತಿದೆ. ರೈತರ ಆಸೆಗೆ ತಣ್ಣೀರು ಎರಚಿದೆ. ಜಿಲ್ಲೆಯ ಮಮದಾಪುರ, ನೆಲಹಾಳ, ಕಲ್ಲೂರು ಸೇರಿ ಹಲವೆಡೆ ಅತಿಯಾದ ಮಳೆಯಿಂದ ಭಾರೀ ನಷ್ಟವಾಗಿದೆ.ಇದನ್ನೂ ಓದಿ:
ರೈತರು ಇನ್ನೇನು ಕೆಲವೇ ದಿನಗಳಲ್ಲಿ ಹತ್ತಿಯನ್ನು ಬಿಡಿಸಿ, ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಹತ್ತಿ ಸಂಪೂರ್ಣ ಒದ್ದೆಯಾಗಿದೆ. ಗಿಡದಲ್ಲೇ ಹತ್ತಿ ಕಾಳುಗಳು ಸಸಿ ಒಡೆಯುತ್ತಿವೆ. ಹತ್ತಿ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದು, ನಷ್ಟದ ಹಾದಿ ಹಿಡಿದಿದೆ. ಹತ್ತಿಯ ಗುಣಮಟ್ಟ ಹಾಳಾಗಿದ್ದು, ಸಿಕ್ಕಷ್ಟು ಸಿಗಲಿ ಎಂದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಉತ್ತಮ ಬೆಲೆ ಸಿಗುವ ಯಾವ ಲಕ್ಷಣಗಳೂ ಇಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 1 ಲಕ್ಷ 76 ಸಾವಿರದ 273 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಪ್ರತಿ ಎಕರೆಗೆ ರೈತರು 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಳೆಯಿಂದಾಗಿ ಖರ್ಚು ಮಾಡಿದ ಹಣವೂ ವಾಪಸ್ ಬರುವ ಲಕ್ಷಣಗಳು ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಹತ್ತಿಗೆ 7500 ರೂ. ಬೆಲೆಯಿದೆ. ಆದರೆ ಮಳೆಯಿಂದ ಹಾಳಾದ ಹತ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದೇ ರೈತರಿಗೆ ಸವಾಲಾಗಿದೆ. ಹತ್ತಿ ಬಿಡಿಸಲು ಕೂಲಿಯಾಳುಗಳಿಗೆ ಖರ್ಚು ಮಾಡಿದ ಹಣವಾದರೂ ವಾಪಸ್ ಬರಲಿ ಎನ್ನುವ ಪರಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಹಾಳಾದ ಬೆಳೆಯ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: