ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಸೋಮವಾರದಿಂದ ಬಿಟ್ಟೂ ಬಿಡದಂತೆ ಮಳೆ (Rain) ಸುರಿಯುತ್ತಿರುವ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೆಲಸ-ಕಾಲೇಜಿಗೆ ಹೋಗುವವರಿಗೆ ಅಡಚಣೆ ಉಂಟಾಗಿದೆ. ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಮಳೆಯ ಪರಿಣಾಮ ರಾಜಧಾನಿಯಲ್ಲಿ ಚುಮುಚುಮು ಚಳಿಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ 2-3 ದಿನ ಜಡಿ ಮಳೆ ಸುರಿಯಲಿದ್ದು, ಬೆಂಗಳೂರಿನಲ್ಲಿ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣಪತ್ರ ಗೊಂದಲ ನಿವಾರಣೆಗೆ ಕ್ರಮ: ಸಿದ್ದರಾಮಯ್ಯ
ಬೆಂಗಳೂರಿನ ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವಡೆ ಮಳೆಯಾಗುತ್ತಿದ್ದು, ಕೆಲಸಗಳಿಗೆ ಹೋಗುವವರು ಪರದಾಡಿದ್ದಾರೆ. ಪರಪ್ಪನ ಅಗ್ರಹಾರ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಸಣ್ಣ ಮಳೆಗೆ ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಹೊಸ ರೋಡ್‌ನಿಂದ ಸರ್ಜಾಪುರ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ. ಇದನ್ನೂ ಓದಿ: ಕಾಡುಗೊಲ್ಲ ಸಮುದಾಯ ಎಸ್ಟಿಗೆ ಸೇರ್ಪಡೆ ವಿಚಾರ – ವಿ.ಸೋಮಣ್ಣ ಭೇಟಿಯಾದ ಟಿಬಿ ಜಯಚಂದ್ರ
ನಿರಂತರ ಮಳೆಯಿಂದಾಗಿ ಬೆಳ್ಳಂದೂರು ಲೇಕ್ ರಸ್ತೆಯಲ್ಲಿ ವಾಹನ ಸವಾರರು ನರಕ ದರ್ಶನ ಪಡೆದಿದ್ದಾರೆ. ಮಳೆಯ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ದೊಡ್ಡದೊಡ್ಡ ಗುಂಡಿ, ಕೆಸರಿನ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ. ಸುತ್ತ 2 ಕಿಲೋ ಮೀಟರ್ ಸಂಚಾರ ಸಾಧ್ಯ ಆಗದೆ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳಗ್ಗೆಯಿಂದ ಹಲವು ವಾಹನಗಳು ಕೆಟ್ಟು ನಿಂತು ಫಜೀತಿಯಾಗಿದೆ. ರಸ್ತೆಯಲ್ಲಿ 4 ಅಡಿಯಷ್ಟು ನೀರು ನಿಂತಿದ್ದು, ಆಳವಾದ ಗುಂಡಿ ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದನ್ನೂ ಓದಿ: 3 ಕ್ಷೇತ್ರಗಳ ಉಪಚುನಾವಣೆಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ: ಸಿಎಂ
ಇನ್ನು ಜೋರು ಮಳೆಯ ಪರಿಣಾಮ ಜಯಮಹಲ್ ರಸ್ತೆಯಲ್ಲಿ ಕೃತಕ ನದಿ ಸೃಷ್ಟಿಯಾಗಿದೆ. ರಸ್ತೆಯುದ್ದಕ್ಕೂ ಕೆಂಪು ನೀರು ಹರಿಯುತ್ತಿದೆ. ಕಾಮಗಾರಿ ಮಾಡಿರುವ ಮಣ್ಣಿನ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ವಾಹನಗಳು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಉತ್ತರ ಹಳ್ಳಿ ರೋಡ್, ಶೇಷಾದ್ರಿಪುರಂ, ಹೆಚ್‌ಎಂಟಿ ಲೇಔಟ್, ಸದಾಶಿವನಗರ, ಓಕಳೀಪುರಂ, ವಿಂಡ್ಸರ್ ಮ್ಯಾನರ್, ಶಿವಾನಂದ ಸರ್ಕಲ್, ಚಾಲುಕ್ಯ ಸರ್ಕಲ್, ಗೊರಗುಂಟೆ ಪಾಳ್ಯ, ಬೆಂಗಳೂರು ಹೊರವಲಯದ ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ, ಹೊಸೂರು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿದ್ದು ಸರಿಯಾಗಿದೆ: ಮಧು ಬಂಗಾರಪ್ಪ