ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

Public TV
2 Min Read
rahul gandhi priyanka gandhi and congress leaders

ನವದೆಹಲಿ: ಹರಿಯಾಣದಲ್ಲಿನ (Haryana Election Results) ಚುನಾವಣಾ ಫಲಿತಾಂಶಗಳು ಅನಿರೀಕ್ಷಿತ ಮತ್ತು ಆಘಾತಕಾರಿ, ಕಾಂಗ್ರೆಸ್ (Congress) ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಕ್ಷವು ತಿಳಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ (Jairam Ramesh), ಹರಿಯಾಣದ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಆಶ್ಚರ್ಯಕರವಾಗಿದೆ. ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಇದು ಹರಿಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಗಾಗಿ ಮನಸ್ಸು ಮಾಡಿದ್ದಕ್ಕೆ ವಿರುದ್ಧವಾಗಿದೆ. ಹೀಗಿರುವಾಗ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹರಿಯಾಣದಲ್ಲಿ ನಾವು ಇಂದು ನೋಡಿರುವುದು ಕುಶಲತೆಯ ಗೆಲುವು, ಜನರ ಇಚ್ಛೆಯನ್ನು ಬುಡಮೇಲು ಮಾಡಿದ ವಿಜಯವಾಗಿದೆ. ಇದು ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಸೋಲು. ಹರಿಯಾಣದ ಅಧ್ಯಾಯ ಪೂರ್ಣವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

Jairam Ramesh

ಮಧ್ಯಾಹ್ನದವರೆಗೆ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ನನ್ನ ದೂರುಗಳಿಗೆ ಅವರು ಉತ್ತರಿಸಿದ್ದಾರೆ. ಅವರ ಉತ್ತರಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ. ಹರಿಯಾಣದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಎಣಿಕೆಯ ಪ್ರಕ್ರಿಯೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ನಾವು ಗಂಭೀರ ದೂರುಗಳನ್ನು ಸ್ವೀಕರಿಸಿದ್ದೇವೆ. ಇನ್ನೂ ಹೆಚ್ಚಿನವುಗಳು ಬರುತ್ತಿವೆ. ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಇಂದು ಅಥವಾ ಮರುದಿನ ಚುನಾವಣಾ ಆಯೋಗಕ್ಕೆ ಪ್ರಸ್ತುತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಈಗ ಬಹುಮುಖ್ಯ ವಿಷಯವೆಂದರೆ ನಮ್ಮ ಗೆಲುವು ಕಿತ್ತುಕೊಳ್ಳಲಾಗಿದೆ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹರಿಯಾಣದಲ್ಲಿ ಕನಿಷ್ಠ 12-14 ಸ್ಥಾನಗಳಲ್ಲಿ ಅಭ್ಯರ್ಥಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಎಣಿಕೆ ಪ್ರಕ್ರಿಯೆಯ ಸಮಗ್ರತೆ ಮತ್ತು ಇವಿಎಂಗಳ ಕಾರ್ಯನಿರ್ವಹಣೆಯನ್ನು ಪ್ರಶ್ನಿಸುತ್ತದೆ ಎಂದು ಜೈರಾಮ್‌ ರಮೇಶ್‌ ದೂರಿದ್ದಾರೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 48 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಹ್ಯಾಟ್ರಿಕ್‌ ಜಯದ ಹೊಸ್ತಿಲಲ್ಲಿದೆ. ದಶಕಗಳ ಬಳಿಕ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ನಿರಾಸೆಯಾಗಿದ್ದು, 37 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಐಎನ್‌ಎಲ್‌ಡಿ 2 ರಲ್ಲಿ ಮುಂದಿದೆ.

Share This Article