Haryana Results| ಕಾಂಗ್ರೆಸ್‌ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು

Public TV
3 Min Read
Rahul Gandhi Bhupinder Hooda Kumari Shailja 2

ನವದೆಹಲಿ: ಹರಿಯಾಣದಲ್ಲಿ ಬಿಜೆಪಿ (BJP) ಹ್ಯಾಟ್ರಿಕ್‌ ಸಾಧನೆ ಮಾಡಿದೆ. ಆಡಳಿತ ವಿರೋಧಿ ಅಲೆಯಿಂದ ಈ ಬಾರಿ ಗೆಲುವು ನಮ್ಮದೇ ಎಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಸೋತಿದೆ.

ಚುನಾವಣಾ (Haryana Election) ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿ (PM Narendra Modi) ಅವರು ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಆ ಪಕ್ಷಕ್ಕೆ ಹರಿಯಾಣ ಜನ ಮತ ಹಾಕುತ್ತಾರೆ ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದರು. ಅದರಂತೆ ಮತ್ತೆ ಹರಿಯಾಣ ಜನತೆ ಬಿಜೆಪಿಗೆ ಮತ ನೀಡಿದ್ದಾರೆ.

ಆಡಳಿತ ವಿರೋಧಿ ಅಲೆ, ರೈತರ ಆಕ್ರೋಶ, ಅಗ್ನಿವೀರ್‌ ನೇಮಕಾತಿ ಮತ್ತು ಕುಸ್ತಿಪಟುಗಳ ಪ್ರತಿಭಟನೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದೇ ಊಹಿಸಲಾಗಿತ್ತು. ಆದರೆ ಹರಿಯಾಣದಲ್ಲಿ ಈ ವಿಚಾರಗಳು ಕೆಲಸ ಮಾಡಿಲ್ಲ.

Rahul Gandhi Bhupinder Hooda Kumari Shailja 1

ಕಾಂಗ್ರೆಸ್‌ ಸೋತಿದ್ದು ಹೇಗೆ?
ಜಾಟ್ ಮತದಾರರ ಮೇಲೆ ಅತಿಯಾದ ಅವಲಂಬನೆ
ರಾಜ್ಯದ ಮತದಾರರ ಪೈಕಿ ಸುಮಾರು 27% ರಷ್ಟಿರುವ ಜಾಟ್ ಮತದಾರರ ಮೇಲೆ ಕಾಂಗ್ರೆಸ್ ಹೆಚ್ಚು ಅವಲಂಬಿತವಾಗಿತ್ತು. ಜಾಟ್ ಪ್ರಾಬಲ್ಯದ ಸ್ಥಾನಗಳ ಪೈಕಿ, ಕೈತಾಲ್, ಜುಲಾನಾ, ಉಚ್ಚಾನ ಕಲಾನ್, ತೋಹಾನಾ, ದಬ್ವಾಲಿ, ಎಲೆನಾಬಾದ್, ನಾರ್ನಾಂಡ್, ಮೆಹಮ್, ಗರ್ಹಿ ಸಂಪ್ಲಾ-ಕಿಲೋಯ್ ಮತ್ತು ಬದ್ಲಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೂ ಪಾಣಿಪತ್ ಗ್ರಾಮಾಂತರ, ಸೋನಿಪತ್, ಗೊಹಾನಾ, ಬಧ್ರಾ, ಜಜ್ಜರ್ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ.

ಇನ್ನೊಂದು ಕಡೆ ಬಿಜೆಪಿ ಜಾಟ್‌ ಜೊತೆ ಒಬಿಸಿ ಮತಗಳನ್ನು ಸೆಳೆಯಲು ಮುಂದಾಯಿತು. ಚುನಾವಣೆ ವೇಳೆ ಜಾಟ್‌ ಮತಗಳು ಕಾಂಗ್ರೆಸ್‌ಗೆ ಬಿದ್ದರೂ ಬಿಜೆಪಿಗೂ ಬಿದ್ದಿದೆ. ಒಬಿಸಿ ವರ್ಗದ ಮತಗಳು ಬಿಜೆಪಿಗೆ ಬಿದ್ದ ಪರಿಣಾಮ ಕಾಂಗ್ರೆಸ್‌ ಚುನಾವಣೆಯಲ್ಲಿ ಸೋತಿದೆ. ಇದನ್ನೂ ಓದಿ: ಸತ್ಯಕ್ಕೆ ಜಯವಾಗಿದೆ: ಚೊಚ್ಚಲ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಫೋಗಟ್ ಮಾತು

ಆಂತರಿಕ ಕಿತ್ತಾಟ
ಆಂತರಿಕ ಕಲಹಗಳು, ವಿಶೇಷವಾಗಿ ದಲಿತ ನಾಯಕಿ ಮತ್ತು ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಮತ್ತು ಮಾಜಿ ಸಿಎಂ ಮತ್ತು ಜಾಟ್ ನಾಯಕ ಭೂಪಿಂದರ್ ಸಿಂಗ್ ಹೂಡಾ ನಡುವಿನ ಕಲಹದಿಂದ ಕಾಂಗ್ರೆಸ್‌ ಭಾರೀ ನಷ್ಟ ಅನುಭವಿಸಿದೆ.

ಹೂಡಾ ಹೇಳಿದ ಅಭ್ಯರ್ಥಿಗಳಿಗೆ  ಟಿಕೆಟ್‌ ನೀಡಿದ್ದಕ್ಕಾಗಿ ಪಕ್ಷದೊಂದಿಗೆ ಅಸಮಾಧಾನಗೊಂಡಿದ್ದ ಸೆಲ್ಜಾ ಕೆಲವು ದಿನಗಳ ಕಾಲ ಪ್ರಚಾರದಿಂದಲೇ ದೂರ ಉಳಿದಿದ್ದರು. ಅವರನ್ನು ಮನವೊಲಿಸಿದ ಬಳಿಕ ಕೊನೆಯ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೇ ಅವರು ಪದೇ ಪದೇ ಸಿಎಂ ಕುರ್ಚಿಯ ಮೇಲೆ ಹಕ್ಕು ಸಾಧಿಸಿದ್ದು ಪಕ್ಷಕ್ಕೆ ಮುಳುವಾಯಿತು.

Nayab Singh Saini

ಸಿಎಂ ಸೈನಿ ಪ್ರಭಾವ:
2014ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದರೂ ಜಾಟ್‌ ಅಲ್ಲದ ಮನೋಹರ್‌ ಲಾಲ್‌ ಕಟ್ಟರ್‌ ಅವರನ್ನು ಸಿಎಂ ಹುದ್ದೆಗೆ ಬಿಜೆಪಿ ಹೈಕಮಾಂಡ್‌ ಆಯ್ಕೆ ಮಾಡಿತ್ತು.ರೈತರ ಹೋರಾಟ ತೀವ್ರಗೊಂಡ ಬಳಿಕ ಲೋಕಸಭೆ ಚುನಾವಣೆಗೂ ಮೊದಲು ಒಬಿಸಿ ಸಮುದಾಯ ನಯಾಬ್ ಸಿಂಗ್ ಸೈನಿಗೆ ಸಿಎಂ ಹುದ್ದೆ ನೀಡಿತ್ತು.

ಕಾಂಗ್ರೆಸ್‌ ಯಾವಾಗಲೂ ಬಿಜೆಪಿಯನ್ನು ದಲಿತ ವಿರೋಧಿ ಎಂದು ದೂರಿಕೊಂಡೇ ಬಂದಿತ್ತು. ತನ್ನ ವಿರುದ್ಧ ಆರೋಪವನ್ನು ತೊಡೆದು ಹಾಕಲು ಬಿಜೆಪಿ ಸೈನಿಗೆ ಸಿಎಂ ಹುದ್ದೆ ನೀಡಿತ್ತು. ಇದರಿಂದಾಗಿ ಬಿಜೆಪಿ ದಲಿತ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಗೆದ್ದರೆ ನಯಾಬ್ ಸಿಂಗ್ ಸೈನಿಯೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿತ್ತು. ಆದರೆ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಪ್ರಕಟಿಸಿರಲಿಲ್ಲ. ಇದನ್ನೂ ಓದಿ: Haryana Election Results | ಆಪ್‌ನಿಂದ ಬಿಜೆಪಿ ಮುನ್ನಡೆ?

ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಫಲ:
ಹರಿಯಾಣದಲ್ಲಿ ಇರುವುದು ಒಟ್ಟು 90 ಕ್ಷೇತ್ರಗಳು. ಆದರೆ ಕಾಂಗ್ರೆಸ್ಸಿನ 2,565 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಬಂಡಾಯ ಶಮನ ಮಾಡಲು ಅಭ್ಯರ್ಥಿಗಳ 8 ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲದೇ ನಾಮಪತ್ರ ಸಲ್ಲಿಸುವ ಕೊನೆಯ ದಿನ ಕಾಂಗ್ರೆಸ್‌ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಟಿಕೆಟ್‌ ಹಂಚಿಕೆಯಲ್ಲೂ ಭೂಪಿಂದರ್ ಸಿಂಗ್ ಹೂಡಾ ಮಾತೇ ಬಹಳಷ್ಟು ಕಡೆ ಫೈನಲ್‌ ಆಗಿತ್ತು. ಅವರ ಬೆಂಬಲಿಗರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಹೂಡಾ ಶಿಫಾರಸು ಮಾಡಿದ ಶಾಸಕರ ಪೈಕಿ 13 ಮಂದಿ ಮಾತ್ರ ಗೆದ್ದಿದ್ದಾರೆ.

Narendra Modi Haryana Assembly Election

ಅತಿಯಾದ ಆತ್ಮವಿಶ್ವಾಸ:
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 10 ಕ್ಷೇತ್ರಗಳ ಪೈಕಿ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಕಾಂಗ್ರೆಸ್‌ ಈ ಚುನಾವಣೆಯನ್ನು ಗೆಲ್ಲಬಹುದು ಎಂದು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಆರಂಭಿಸಿತ್ತು.

ಕೈ ಹಿಡಿಯದ ಗ್ಯಾರಂಟಿ:
ಹರಿಯಾಣದಲ್ಲೂ ಕಾಂಗ್ರೆಸ್‌ ಭರ್ಜರಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿತ್ತು. ಆದರೆ ಬಿಜೆಪಿ ಹಿಮಾಚಲ ಮತ್ತು ಕರ್ನಾಟಕದ ಉದಾಹರಣೆ ನೀಡಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರಚಾರ ಮಾಡಿತ್ತು. ಅದರಲ್ಲೂ ಮೋದಿ ಅವರು ಹಲವು ಬಾರಿ ಈ ಎರಡು ರಾಜ್ಯಗಳ ಉದಾಹರಣೆಯನ್ನು ಕಾಂಗ್ರೆಸ್‌ ಗ್ಯಾರಂಟಿಯನ್ನು ಟೀಕೆ ಮಾಡಿದ್ದರು.

Share This Article