ಸತ್ಯಕ್ಕೆ ಜಯವಾಗಿದೆ: ಚೊಚ್ಚಲ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಫೋಗಟ್ ಮಾತು

Public TV
2 Min Read
Vinesh Phogat 2

ನವದೆಹಲಿ: ʻಸತ್ಯಕ್ಕೆ ಜಯವಾಗಿದೆ’ ಎಂದು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೊದಲ ಗೆಲುವು ಸಾಧಿಸಿದ ಬಳಿಕ ವಿನೇಶ್ ಫೋಗಟ್ (Vinesh Phogat) ಪ್ರತಿಕ್ರಿಯೆ ನೀಡಿದರು.

ಹರಿಯಾಣ (Hariyana) ಚುನಾವಣೆಯ ಜೂಲಾನಾ (Julana) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್ ಫೋಗಟ್ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದರು. ಒಲಿಂಪಿಕ್ಸ್‌ನಲ್ಲಿ ಅನರ್ಹಗೊಳ್ಳುವ ಮೂಲಕ ಸೋಲನ್ನು ಅನುಭವಿಸಿದ್ದರು. ಇದಾದ ಬಳಿಕ ಸೆ.4 ರಂದು ಕಾಂಗ್ರೆಸ್‌ಗೆ ಸೇರಿಕೊಂಡ ವಿನೇಶ್ ಇಂದು ಚುನಾವಣಾ ಕುಸ್ತಿಯಲ್ಲಿ ತನ್ನ ಚೊಚ್ಚಲ ಗೆಲುವನ್ನು ಸಾಧಿಸಿದ್ದಾರೆ.ಇದನ್ನೂ ಓದಿ: ಸೂರ್ಯನಿಗೆ ಬೇಕಿದೆ 39 ರನ್‌ – ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಮಿಸ್ಟರ್‌ 360

ಚೊಚ್ಚಲ ಗೆಲುವು ಕಂಡ ವಿನೇಶ್ ಮಾತನಾಡಿ, ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ನಾನು ನನ್ನ ಕ್ರೀಡಾ ಜೀವನದಲ್ಲಿ ಅನುಭವಿಸಿದ ನೋವನ್ನು ಬೇರೆ ಕ್ರೀಡಾಪಟುಗಳು ಅನುಭವಿಸುವುದು ಬೇಡ ಎಂದು ಬಯಸುತ್ತೇನೆ ಎಂದರು.

ನನ್ನ ರಾಜಕೀಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕಾಂಗ್ರೆಸ್ (Congress) ಪಕ್ಷಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸಮಯ ಸರಿಯಿಲ್ಲದೇ ಇರುವಾಗ ಮಾತ್ರ ನಮ್ಮ ಜೊತೆ ಯಾರು ನಿಂತಿದ್ದಾರೆ ಎಂದು ಗೊತ್ತಾಗುತ್ತದೆ. ಬಿಜೆಪಿ (BJP) ಪಕ್ಷವನ್ನು ಹೊರತುಪಡಿಸಿ ಇತರ ಎಲ್ಲಾ ಪಕ್ಷಗಳು ನನ್ನ ನೋವನ್ನು ಹಾಗೂ ನನ್ನ ಕಣ್ಣೀರನ್ನು ಅರ್ಥಮಾಡಿಕೊಂಡಿದ್ದವು ಎಂದರು.

ವಿನೇಶ್ ಫೋಗಟ್ ಗೆಲುವು:
ಅ.5 ರಂದು ನಡೆದ ಹರಿಯಾಣ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಬಹುಮತದ ಅಂಕವನ್ನು ದಾಟಿ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಕಾಂಗ್ರೆಸ್ 37 ಸ್ಥಾನಗಳಲ್ಲಿದ್ದು, 11 ಸ್ಥಾನಗಳಿಂದ ಹಿನ್ನಡೆಯಲ್ಲಿತ್ತು. ಆದರೂ ಕೂಡ ಜೂಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಗೆಲುವನ್ನು ಸಾಧಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿಯು ಮೂರನೇ ಅವಧಿಗೆ ಸಿದ್ಧವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪುನರಾಗಮನವನ್ನು ಊಹಿಸಿದ ಎಕ್ಸಿಟ್ ಪೋಲ್‌ನ ಫಲಿತಾಂಶಗಳು ಸುಳ್ಳಾಗಿವೆ.

ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಮತ್ತು ವಿನೇಶ್ ಫೋಗಟ್ ಮಧ್ಯೆ ನೇರಾನೇರ ಪೈಪೋಟಿ ಇತ್ತು. ಆರಂಭದ ಮತ ಎಣಿಕೆಯಲ್ಲಿ ವಿನೇಶ್ ಫೋಗಟ್ ಅವರಿಗೆ ಮುನ್ನಡೆ ಸಿಕ್ಕಿದರೆ ನಂತರ ಯೋಗೇಶ್ ಕುಮಾರ್ ಅವರಿಗೆ ಮುನ್ನಡೆ ಸಿಕ್ಕಿತ್ತು. ಅಂತಿಮ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಿದ್ದ ಪರಿಣಾಮ ವಿನೇಶ್ ಫೋಗಟ್ ಮೊದಲ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.ಇದನ್ನೂ ಓದಿ: ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ – ಆರ್‌ಜಿ ಕರ್ ಆಸ್ಪತ್ರೆಯ 45ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ

Share This Article